ಉಡುಪಿ: ದೇಶ-ವಿದೇಶದ ಕೋಟ್ಯಂತರ ಭಕ್ತರ ಆರಾಧನಾ ಕೇಂದ್ರವಾದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಅವ್ಯವಹಾರದಂತಹ ಗಂಭೀರ ಆರೋಪಗಳು ಕೇಳಿಬಂದಿರುವುದು ಅತ್ಯಂತ ದುರದೃಷ್ಟಕರ. ಆರೋಪಗಳು ಸತ್ಯವಾಗಿದ್ದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದರು.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆಯ ಮೇಲೆ ವಿಶ್ವಾಸವಿದ್ದು, ಶೀಘ್ರದಲ್ಲೇ ಸತ್ಯಾಸತ್ಯತೆ ಹೊರಬರಬೇಕು ಎಂದು ಹೇಳಿದರು.
200 ಕೆ.ಜಿ. ಬೆಳ್ಳಿ ದೇಣಿಗೆ ನೀಡಿದರೂ ರಶೀದಿ ನೀಡಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ದೇಣಿಗೆ ಸ್ವೀಕರಿಸುವವರಿಗೂ ಮತ್ತು ನೀಡುವವರಿಗೂ ಸಮಾನ ಜವಾಬ್ದಾರಿ ಇದೆ. ರಶೀದಿ ನೀಡದಿರುವುದು ಗಂಭೀರ ಲೋಪವಾಗಿದ್ದು, ತನಿಖೆಯಲ್ಲಿ ಸತ್ಯಾಂಶ ಹೊರಬರಬೇಕಿದೆ ಎಂದು ಹೇಳಿದರು.
ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಟ್ರಸ್ಟ್ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಯಾವುದೇ ಮಾಹಿತಿ ಬಂದಿಲ್ಲ. ಈ ಕುರಿತು ಅಧಿಕೃತ ಮಾಹಿತಿ ಇಲ್ಲದ ಕಾರಣ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.
ಆರ್‌ಎಸ್‌ಎಸ್ ನೋಂದಣಿ ಕುರಿತು ಮಾತನಾಡಿದ ಅವರು, ಸಂಘಟನೆಯನ್ನು ನೋಂದಾಯಿಸಿದರೆ ಅನಗತ್ಯ ಗೊಂದಲಗಳಿಗೆ ಅವಕಾಶ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಸಮಾಜಸೇವೆಯ ಮಹತ್ವವನ್ನು ಒತ್ತಿಹೇಳಿದ ಶ್ರೀಗಳು, ದೇವರಿಗೆ ದೊಡ್ಡ ಮೊತ್ತದ ದೇಣಿಗೆ ನೀಡುವುದಕ್ಕಿಂತ ಬಡವರು, ದೀನದಲಿತರು ಹಾಗೂ ಅವಕಾಶ ವಂಚಿತರಿಗೆ ಮನೆ ನಿರ್ಮಿಸಿಕೊಡುವುದು ನಿಜವಾದ ರಾಮಸೇವೆ ಎಂದು ಹೇಳಿದರು. ಸಮಾಜದ ದುಃಖಿತರಿಗೆ ನೆರವಾಗುವುದೇ ದೇವರ ಸೇವೆಯಾಗಿದ್ದು, ಪ್ರತಿಯೊಬ್ಬರೂ ತಮ್ಮ ವೃತ್ತಿಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.