ಸಾಲು ಸಾಲು ರಜೆ, ವೀಕೆಂಡ್ ಹಿನ್ನೆಲೆ ಪ್ರವಾಸಿಗರ ದಂಡು; ಕೃಷ್ಣಮಠದಲ್ಲಿ ಭಕ್ತರ ನೂಕುನುಗ್ಗಲು
ಉಡುಪಿ, ಜೂ. 27: ಸಾಲು ಸಾಲು ಸರ್ಕಾರಿ ರಜೆಗಳು ಹಾಗೂ ವಾರಾಂತ್ಯ (ವೀಕೆಂಡ್) ಹಿನ್ನೆಲೆಯಲ್ಲಿ ಉಡುಪಿ ನಗರಕ್ಕೆ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ನಗರದಲ್ಲಿ ದಿನವಿಡೀ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ವಿಶೇಷವಾಗಿ ಶ್ರೀ ಕೃಷ್ಣ ಮಠಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಮಠದ ಆಸುಪಾಸು ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಯಿತು. ಶನಿವಾರವಾದ ಹಿನ್ನೆಲೆಯಲ್ಲಿ ಸ್ಥಳೀಯ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ದರ್ಶನಕ್ಕಾಗಿ ಉದ್ದ ಸಾಲುಗಳು ಕಂಡುಬಂದವು.
ಕೃಷ್ಣ ಮಠದ ಪಾರ್ಕಿಂಗ್ ಸ್ಥಳಗಳು ಬೆಳಗ್ಗೆಯೇ ಭರ್ತಿಯಾಗಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶ ಸಿಗದೆ ಅನೇಕ ವಾಹನ ಸವಾರರು ಪರದಾಡಿದರು. ಮಠದ ಸುತ್ತಮುತ್ತಲಿನ ರಸ್ತೆಗಳಲ್ಲಿಯೂ ವಾಹನಗಳ ಉದ್ದ ಸಾಲು ಕಂಡುಬಂತು.
ನಗರದ ಪ್ರಮುಖ ಬಸ್ ನಿಲ್ದಾಣ, ಕಲ್ಸಂಕ ಜಂಕ್ಷನ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರ ನಿಧಾನಗತಿಯಲ್ಲಿ ಸಾಗಿತು. ಇದರಿಂದ ಸ್ಥಳೀಯ ವಾಹನ ಸವಾರರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು.
ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳು ಮತ್ತು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.