ಉಡುಪಿಯಿಂದ ಕಾಸರಗೋಡು ಜಿಲ್ಲೆಗೆ ಸಂಪರ್ಕ ಕಲ್ಪಿಸುವ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯಿಂದ ಕೃಷಿ ಭೂಮಿಯನ್ನು ಕಳೆದುಕೊಂಡು ಪರಿಹಾರಕ್ಕಾಗಿ ಕಾಯುತ್ತಿರುವ ರೈತರ ಸಮಸ್ಯೆಗಳ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ, ಬಾಕಿ ಉಳಿದಿರುವ ಪರಿಹಾರವನ್ನು ತ್ವರಿತವಾಗಿ ವಿತರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಉಡುಪಿ–ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗವು ಬಂಟ್ವಾಳ ತಾಲೂಕಿನ ಹಲವು ಗ್ರಾಮಗಳ ಮೂಲಕ ಹಾದುಹೋಗಿದ್ದು, ಯೋಜನೆಗಾಗಿ ಅನೇಕ ರೈತರ ಕೃಷಿ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಈಗಾಗಲೇ ಬಹುತೇಕ ಫಲಾನುಭವಿಗಳಿಗೆ ಪರಿಹಾರ ವಿತರಿಸಲಾಗಿದ್ದರೂ, ತಾಂತ್ರಿಕ ಹಾಗೂ ಜಮೀನಿನ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕಾರಣ ಕೆಲ ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರನ್ನು ಶಾಸಕರ ಕಚೇರಿಗೆ ಆಹ್ವಾನಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ರೈತರಿಂದ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಪ್ರತಿಯೊಂದು ಅಡಚಣೆಯನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಕಾನೂನು ಹಾಗೂ ಸರ್ಕಾರದ ನಿಯಮಾನುಸಾರ ಶೀಘ್ರದಲ್ಲಿ ಪರಿಹಾರ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ರೈತರು ತಮ್ಮ ಬೆಲೆಬಾಳುವ ಕೃಷಿ ಭೂಮಿಯನ್ನು ಕಳೆದುಕೊಂಡಿರುವುದರಿಂದ ಜೀವನೋಪಾಯಕ್ಕೆ ತೀವ್ರ ತೊಂದರೆಯಾಗಿದೆ. ಯೋಜನೆಯಿಂದ ಉಂಟಾದ ನಷ್ಟವನ್ನು ಪರಿಗಣಿಸಿ ಸರ್ಕಾರದ ನಿಯಮಾನುಸಾರ ಗರಿಷ್ಠ ಪ್ರಮಾಣದ ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ರೈತರ ಹಿತಾಸಕ್ತಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಅಧಿಕಾರಿಗಳು ವೈಯಕ್ತಿಕವಾಗಿ ಪರಿಶೀಲಿಸಿ ಶೀಘ್ರದಲ್ಲಿ ಇತ್ಯರ್ಥಪಡಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಜನಾರ್ದನ, ಯೋಜನೆಯ ಪ್ರಾಜೆಕ್ಟ್ ಹೆಡ್ ವೆಂಕಟೇಶ್ ಪೂಜಾರಿ, ಮ್ಯಾನೇಜರ್ಗಳಾದ ಅಭಿಷೇಕ್ ಹಾಗೂ ಆಗ್ನಲ್ ಗೊಂಝಾಲ್ವೆಸ್, ಸಹಾಯಕ ವ್ಯವಸ್ಥಾಪಕರಾದ ರೋಹಿತ್ ಮತ್ತು ಸಚಿನ್, ಅಧಿಕಾರಿ ಝೇರಾಮ್ ಸೇರಿದಂತೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

