ಹೊಸದಿಲ್ಲಿ: ಭಾರತ-ಜಪಾನ್ ಶೃಂಗಸಭೆಯ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಹತ್ತು ವರ್ಷಗಳಲ್ಲಿ ಜಪಾನ್‌ನಿಂದ ಭಾರತಕ್ಕೆ 10 ಟ್ರಿಲಿಯನ್ ಯೆನ್ ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ಭಾರತದಲ್ಲಿರುವ ಜಪಾನಿನ ಕಂಪನಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವುದಾಗಿ ಘೋಷಿಸಿದರು.
ಜಪಾನ್ ಪ್ರಧಾನಿ ಸನೆ ತಕೈಚಿ ಅವರ ಭಾರತ ಭೇಟಿಯು ಉಭಯ ರಾಷ್ಟ್ರಗಳ ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದು ಮೋದಿ ಹೇಳಿದರು. ಇದೇ ವೇಳೆ, ಭಾರತ ಮತ್ತು ಜಪಾನ್ ತಮ್ಮ ಮೊದಲ ಜಂಟಿ ರಕ್ಷಣಾ ಅಭಿವೃದ್ಧಿ ಯೋಜನೆಯಾದ ಯುನಿಫೈಡ್ ಕಾಂಪ್ಲೆಕ್ಸ್ ರೇಡಿಯೋ ಆಂಟೆನಾ (UNICORN) ಯೋಜನೆಗೆ ಸಹಿ ಹಾಕಿರುವುದಾಗಿ ತಿಳಿಸಿದರು.

ಈ ಯೋಜನೆಯು ಭಾರತೀಯ ನೌಕಾಪಡೆಯ ರಹಸ್ಯ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಉಭಯ ದೇಶಗಳ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದರು. ಜಪಾನ್ ತನ್ನ ರಕ್ಷಣಾ ಉತ್ಪನ್ನಗಳ ರಫ್ತಿನ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಈ ಯೋಜನೆಗೆ ಅನುಮೋದನೆ ದೊರೆತಿದೆ.
ಶೃಂಗಸಭೆಯಲ್ಲಿ ಸೆಮಿಕಂಡಕ್ಟರ್‌ಗಳು, ಪ್ರಮುಖ ಖನಿಜಗಳು ಸೇರಿದಂತೆ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿ ಸ್ಥಿರತೆಯನ್ನು ಹೆಚ್ಚಿಸಲು ಆರ್ಥಿಕ ಭದ್ರತಾ ಮಾರ್ಗಸೂಚಿಯನ್ನು ಉಭಯ ನಾಯಕರು ಅಂಗೀಕರಿಸಿದರು. ಜೊತೆಗೆ, 15 ವರ್ಷಗಳ ಹಿಂದಿನ ಭಾರತ–ಜಪಾನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA)ವನ್ನು ಮರುಪರಿಶೀಲಿಸಿ, ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಸಹ ಒಪ್ಪಿಗೆ ನೀಡಿದರು.
ಕೃತಕ ಬುದ್ಧಿಮತ್ತೆ, ಇಂಧನ ಭದ್ರತೆ, ಖನಿಜಗಳ ಅನ್ವೇಷಣೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಮುಂದಿನ ತಲೆಮಾರಿನ ಸಂಚಾರ ಸಹಭಾಗಿತ್ವ ಚೌಕಟ್ಟನ್ನೂ ಸಿದ್ಧಪಡಿಸಲಾಗಿದ್ದು, ಆಟೋಮೊಬೈಲ್ ಕ್ಷೇತ್ರದ ಯಶಸ್ಸನ್ನು ಹಡಗು ನಿರ್ಮಾಣ, ವಿಮಾನಯಾನ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಗೂ ವಿಸ್ತರಿಸಲು ಉಭಯ ದೇಶಗಳು ನಿರ್ಧರಿಸಿವೆ.
ಪ್ರತಿಭೆ ವಿನಿಮಯ, ಉದ್ಯೋಗ ಚಲನಶೀಲತೆ, ಕೌಶಲ್ಯಾಭಿವೃದ್ಧಿ ಮತ್ತು ತಾಂತ್ರಿಕ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಮೂಲಕ ಭಾರತ-ಜಪಾನ್ ಜನರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು.


