ಭಾರೀ ಗಾಳಿ-ಮಳೆ ಅಬ್ಬರ: ಬಂಟ್ವಾಳದಲ್ಲಿ ಐದು ಮನೆಗಳಿಗೆ ಹಾನಿ

ಮರ ಬಿದ್ದು, ಬರೆ ಜರಿದು ಹಾನಿ; ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಬಂಟ್ವಾಳ, ಜು. 8: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ-ಮಳೆಯ ಪರಿಣಾಮ ವಿವಿಧ ಗ್ರಾಮಗಳಲ್ಲಿ ಐದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅಮ್ಮುಂಜೆ ಗ್ರಾಮದ ನೆಫಿಸಾ ಕೋಂ ಹಾಮದ್ ಅವರ ಮನೆಗೆ ಭಾಗಶಃ ಹಾನಿಯಾಗಿದ್ದು, ಮುಡೈಕೋಡಿಕುಳ ಗ್ರಾಮದ ಮೋಂಟೆಮಾರು ನಿವಾಸಿ ಗಿರಿಜ ಕೋಂ ಬಾಬು ಗೌಡ ಅವರ ವಾಸ್ತವ್ಯದ ಮನೆಗೆ ಹೊಂದಿಕೊಂಡಿದ್ದ ಶೀಟ್ ಅಳವಡಿಸಿದ ಉಪಕಟ್ಟಡ ಗಾಳಿ-ಮಳೆಯಿಂದ ಹಾನಿಗೊಳಗಾಗಿದೆ.

ಕನ್ಯಾನ ಗ್ರಾಮದ ಪನೆಯಡ್ಕ ನಿವಾಸಿ ಹರಿಣಾಕ್ಷಿ ಕೋಂ ಲಕ್ಷ್ಮಣ ಗೌಡ ಅವರ ಕಚ್ಚಾ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿದೆ. ಪುದು ಗ್ರಾಮದ ಅಮ್ಮೇಮಾರ್ ಪ್ರದೇಶದಲ್ಲಿ ಇಕ್ಬಾಲ್ ಹಸಿರ್ ಅವರ ಮನೆ ಮಳೆಯಿಂದ ಹಾನಿಗೊಳಗಾಗಿದ್ದು, ಈ ಘಟನೆಯಲ್ಲೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದೇ ವೇಳೆ ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಕೋಡಿ ಪ್ರದೇಶದಲ್ಲಿ ಸಾವಿತ್ರಿ ಕೋಂ ರವಿ ಅವರ ಮನೆಯ ಹಿಂಭಾಗದ ಬರೆ ಜರಿದು ಮಣ್ಣು ಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿದೆ.

ನಿರಂತರ ಮಳೆಯ ಹಿನ್ನೆಲೆಯಲ್ಲಿ ಹಾನಿಗೊಳಗಾದ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ತಗ್ಗು ಪ್ರದೇಶಗಳು ಹಾಗೂ ಗುಡ್ಡದ ಆಸುಪಾಸಿನ ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!