ಬಂಟ್ವಾಳ | ಜು. 9: ತಾಲೂಕಿನ ಬಿ.ಮೂಡ ಗ್ರಾಮದ ಪಲ್ಲಮಜಲು ಪ್ರದೇಶದಲ್ಲಿರುವ ಕಲ್ಲುಕೋರೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿದರು. ಹೋರಾಟಗಾರರು ಸಲ್ಲಿಸಿದ್ದ ಹೊಸ ದೂರಿನ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿದ್ದು, ಗ್ರಾಮಸ್ಥರು ಮತ್ತು ಹೋರಾಟಗಾರರು ಅಧಿಕಾರಿಗಳಿಗೆ ಹಲವು ಅಹವಾಲುಗಳನ್ನು ಸಲ್ಲಿಸಿದರು.
ಕಲ್ಲು ಸಿಡಿಸಲು ಅಗತ್ಯ ಅನುಮತಿ ಇಲ್ಲದಿದ್ದರೂ ಕಳೆದ ಸುಮಾರು 17 ವರ್ಷಗಳಿಂದ ಸ್ಫೋಟಕಗಳನ್ನು ಬಳಸಿ ಕಲ್ಲು ಒಡೆದು ಸಾಗಾಟ ನಡೆಸಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದರು. ಈ ಕುರಿತು ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಪ್ರಕರಣದ ತನಿಖೆ ಜಿಲ್ಲಾಧಿಕಾರಿಗಳ ಹಂತದಲ್ಲಿದೆ ಎಂದು ತಿಳಿಸಿದರು.

ಇತ್ತೀಚೆಗೆ ಗಣಿ ಇಲಾಖೆಗೆ ಸಲ್ಲಿಸಲಾದ ಹೊಸ ದೂರಿನ ಆಧಾರದ ಮೇಲೆ ಇಲಾಖೆಯ ಅಧಿಕಾರಿ ದಿಲೀಪ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳಾದ ಪವನ್ ಹಾಗೂ ಮಾದೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಕಲ್ಲುಕೋರೆಯಿಂದ ಉಂಟಾಗುತ್ತಿರುವ ಪರಿಸರ ಹಾನಿ ಹಾಗೂ ಸಾರ್ವಜನಿಕ ಸುರಕ್ಷತೆಗೆ ಎದುರಾಗಿರುವ ಸಮಸ್ಯೆಗಳ ಕುರಿತು ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದರು.
ಕೋರೆಯ ಸಮೀಪದ ಮನೆಯ ಮಾಲಕರೊಬ್ಬರು ಗಣಿಗಾರಿಕೆಯಿಂದ ಗುಡ್ಡ ಕುಸಿದು ತಮ್ಮ ಮನೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದು, ಈ ಸಂಬಂಧ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ದೂರು ಸಲ್ಲಿಸುವುದಾಗಿ ಹೇಳಿದರು.
ಸ್ಥಳ ಪರಿಶೀಲನೆಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


