ನೇತ್ರಾವತಿ ನೀರಿನ ಮಟ್ಟ ಏರಿಕೆಯಾಗದೆ ಆತಂಕ; ವಾಲಿದ ಅಳತೆ ಸ್ತಂಭ ದುರಸ್ತಿಗೆ ಆಗ್ರಹ

ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟದಲ್ಲಿ ಭಾರೀ ಕುಸಿತ; ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹಕ್ಕೆ ಆದ್ಯತೆ

ಬಂಟ್ವಾಳ, ಜು. 10: ಕಳೆದ ವರ್ಷ ಇದೇ ಅವಧಿಯಲ್ಲಿ ಅಪಾಯದ ಮಟ್ಟದ ಸಮೀಪ ಹರಿದು ಆತಂಕ ಸೃಷ್ಟಿಸಿದ್ದ ನೇತ್ರಾವತಿ ನದಿ, ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ತುಂಬಿಕೊಳ್ಳದೆ ಆತಂಕಕ್ಕೆ ಕಾರಣವಾಗಿದೆ. ಮಳೆಗಾಲ ಆರಂಭವಾಗಿ ಹಲವು ದಿನಗಳಾದರೂ ನದಿಯ ನೀರಿನ ಮಟ್ಟ ಕಂದಾಯ ಇಲಾಖೆ ಅಳವಡಿಸಿರುವ ಮೀಟರ್ ಗೇಜ್‌ನ ಬುಡವನ್ನೇ ಸಮರ್ಪಕವಾಗಿ ತಲುಪಿಲ್ಲ.

ಬಿ.ಸಿ.ರೋಡ್ ಸಮೀಪದ ಕಂಚಿಕಾರಪೇಟೆಯಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಅಳೆಯಲು ಮೀಟರ್ ಗೇಜ್ ಅಳವಡಿಸಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಮಟ್ಟ ಸುಮಾರು 5.9 ಮೀಟರ್ ತಲುಪಿದ್ದರೆ, ಈ ಬಾರಿ ಇದುವರೆಗೆ 4 ಮೀಟರ್ ದಾಟಿಲ್ಲ ಎಂದು ದಾಖಲೆಗಳು ತಿಳಿಸಿವೆ.

ಇದರ ನಡುವೆ, ನೀರಿನ ಮಟ್ಟ ಅಳೆಯಲು ಅಳವಡಿಸಿರುವ ಅಳತೆ ಸ್ತಂಭಗಳ ಪೈಕಿ ಒಂದು ಸ್ತಂಭ ವಾಲಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಿಂದ ನೀರಿನ ಮಟ್ಟ ಏರಿಕೆಯಾದರೆ ನಿಖರ ಅಳತೆ ಪಡೆಯಲು ಇದು ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ, ಸಂಬಂಧಿತ ಇಲಾಖೆ ತಕ್ಷಣ ದುರಸ್ತಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನಿರ್ಮಿಸಲಾಗಿರುವ ತುಂಬೆ ವೆಂಟೆಡ್ ಡ್ಯಾಂನಲ್ಲೂ ನೀರು ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಡ್ಯಾಂನ ಒಟ್ಟು 30 ಗೇಟ್‌ಗಳ ಪೈಕಿ 20 ಗೇಟ್‌ಗಳನ್ನು ಮುಚ್ಚಿ ನೀರನ್ನು ಸಂಗ್ರಹಿಸಲಾಗುತ್ತಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ಕಂಡುಬರುವಂತೆ ಗೇಟ್‌ಗಳನ್ನು ತೆರೆಯುವ ಪರಿಸ್ಥಿತಿ ಈ ಬಾರಿ ನಿರ್ಮಾಣವಾಗಿಲ್ಲ.

ಬಂಟ್ವಾಳ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಿರುಗಾಳಿಯ ಪ್ರಮಾಣ ಹೆಚ್ಚಾಗಿದ್ದರೂ, ನಿರಂತರ ಮಳೆಯ ಕೊರತೆ ಎದುರಾಗಿದೆ. ಅಲ್ಪಾವಧಿಯ ಮಳೆ ಮತ್ತು ಬಲವಾದ ಗಾಳಿಯಿಂದ ಮರಗಳು ಉರುಳುವುದು, ಮನೆಗಳಿಗೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗುವ ಘಟನೆಗಳು ಹೆಚ್ಚಾಗುತ್ತಿವೆ. ಆದರೆ, ಸಮರ್ಪಕ ಮಳೆಯ ಕೊರತೆಯಿಂದ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ.

ಸದ್ಯ ನದಿಯಲ್ಲಿ ನೀರಿನ ಹರಿವು ಸಣ್ಣ ಪ್ರಮಾಣದಲ್ಲಿ ಮಾತ್ರ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬರುವ ನಿರೀಕ್ಷೆಯಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!