ಆಲಪ್ಪುಳ:ಬದುಕಿನ ಹೊಸ ಕನಸುಗಳನ್ನು ಹೊತ್ತು ನಾಲ್ಕು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವ ದಂಪತಿಯ ಬದುಕು ದುರಂತ ಅಂತ್ಯ ಕಂಡಿದೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆ ಸುದ್ದಿ ತಿಳಿದು ಸ್ವದೇಶಕ್ಕೆ ಹೊರಟಿದ್ದ ಪತಿ ಬೆಂಗಳೂರಿನ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ತೀವ್ರ ವಿಷಾದ ಮೂಡಿಸಿದೆ.

ಮೃತರನ್ನು ಎಡತ್ತ ಕೊಡುಪುನ್ನ ನಿವಾಸಿ ಪಿ.ಎಸ್. ಸನುಕ್ಕುಟ್ಟನ್ (30) ಎಂದು ಗುರುತಿಸಲಾಗಿದೆ. ಅವರ ಪತ್ನಿ ಹರೀಷ್ಮಾ (27) ಅವರನ್ನು ಎರಡು ದಿನಗಳ ಹಿಂದೆ ಮಾವೇಲಿಕ್ಕರ ಸಮೀಪದ ಉಂಬರ್ನಾಡಿನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿತ್ತು. ಮೂರು ತಿಂಗಳ ಗರ್ಭಿಣಿಯಾಗಿದ್ದ ಹರೀಷ್ಮಾ ಅವರ ಅಂತ್ಯಕ್ರಿಯೆ ಈಗಾಗಲೇ ನೆರವೇರಿಸಲಾಗಿದೆ.

ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಸನುಕ್ಕುಟ್ಟನ್, ಉದ್ಯೋಗ ನಿಮಿತ್ತ ಒಂದು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ದರು. ಪತ್ನಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಸಂಪರ್ಕ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ಬಳಿಕ ನೆಡುಂಬಾಶೇರಿ ವಿಮಾನ ನಿಲ್ದಾಣ ತಲುಪುವುದಾಗಿ ಅವರು ಕುಟುಂಬದವರಿಗೆ ಮಾಹಿತಿ ನೀಡಿದ್ದರು.

ಈ ಮಾಹಿತಿ ಆಧರಿಸಿ ಕುಟುಂಬಸ್ಥರು ನೆಡುಂಬಾಶೇರಿ ವಿಮಾನ ನಿಲ್ದಾಣದಲ್ಲಿ ಕಾದಿದ್ದರೂ ಅವರು ಅಲ್ಲಿಗೆ ತಲುಪಲಿಲ್ಲ. ಬಳಿಕ ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಬೆಂಗಳೂರಿಗೆ ಬಂದಿರುವುದು ದೃಢಪಟ್ಟಿತು. ಆದರೆ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಬೆಂಗಳೂರಿಗೆ ತೆರಳಿ, ಸ್ಥಳೀಯ ಪೊಲೀಸರ ಹಾಗೂ ಮಲಯಾಳಿ ಸಂಘಟನೆಗಳ ನೆರವು ಕೋರಿದರು.

ಈ ಮಧ್ಯೆ ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಮಲಯಾಳಿ ಯುವಕನ ಮೃತದೇಹ ಪತ್ತೆಯಾದ ಮಾಹಿತಿ ಪೊಲೀಸರಿಗೆ ಲಭಿಸಿತು. ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೃತದೇಹವನ್ನು ಸನುಕ್ಕುಟ್ಟನ್ ಅವರದ್ದೇ ಎಂದು ಗುರುತಿಸಿದರು.
ಸತತ ಎರಡು ಸಾವಿನಿಂದ ಎರಡು ಕುಟುಂಬಗಳು ಆಘಾತಕ್ಕೆ ಒಳಗಾಗಿದ್ದು, ಈ ದುರ್ಘಟನೆ ಸ್ಥಳೀಯರಲ್ಲಿ ತೀವ್ರ ಮರುಕ ಮೂಡಿಸಿದೆ. ಪ್ರಕರಣದ ಕುರಿತು ಬೆಂಗಳೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

