ಮಂಗಳೂರು:ಅಂಬುರುಹ ಯಕ್ಷ ಕಲಾ ಕೇಂದ್ರ, ಮಾಲೆಮಾರ್ ವತಿಯಿಂದ 8ನೇ ವರ್ಷದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಜುಲೈ 20ರಂದು ಮುಲ್ಲಕಾಡು, ಕಾವೂರು ಶ್ರೀ ಕೋಟದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘದ ಪ್ರಮುಖರಾದ ಕಲಾ ಸಾರಥಿ ಕುಮಾರ್ ಮಾಲೆಮಾರ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಯಕ್ಷಗಾನ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಅಂಬುರುಹ ಯಕ್ಷ ಕಲಾ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ ಮಕ್ಕಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅಷ್ಟಮ ಸಂಭ್ರಮವನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಕಲಿಕಾ ಕೇಂದ್ರದ ವಿದ್ಯಾರ್ಥಿಗಳೇ ಯಕ್ಷಗಾನ ಪ್ರದರ್ಶನ ನೀಡಲಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಬೆಳಿಗ್ಗೆ 8.30ಕ್ಕೆ ಅಂಬುರುಹ ತಂಡದ ಸದಸ್ಯರಿಂದ ಕುಣಿತ ಭಜನೆ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಜನಸೇವಾ ಕೇಂದ್ರದ ಸಹಯೋಗದಲ್ಲಿ ಉಚಿತ ಜನಸೇವಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ, ಹೆಸರು ಮತ್ತು ವಿಳಾಸ ಬದಲಾವಣೆ, ಬಯೋಮೆಟ್ರಿಕ್ ನವೀಕರಣ, ಆಯುಷ್ಮಾನ್ ಭಾರತ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಸೇರಿದಂತೆ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಗುವುದು ಎಂದು ತಿಳಿಸಿದರು.

ಮಧ್ಯಾಹ್ನ 3 ಗಂಟೆಯಿಂದ ಪುಟಾಣಿ ಮಕ್ಕಳಿಗಾಗಿ ಯಕ್ಷಗಾನ ವೇಷ ಪ್ರದರ್ಶನ ಹಾಗೂ ‘ಕೃಷ್ಣಲೀಲೆ’ ಯಕ್ಷಗಾನ ಪ್ರಸಂಗ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ಜರುಗಲಿದ್ದು, ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೇವಿ ಮಹಾತ್ಮೆಯ ಕಥೆಯಾಧಾರಿತ ‘ಶಾಂಭವಿ ವಿಜಯ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಕಲಿಕಾ ಕೇಂದ್ರದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು. ದಿವಂಗತ ವೇಷಧಾರಿ ಉರ್ವ ಅಮ್ಮು ಅವರ ಸ್ಮರಣಾರ್ಥ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ಬೋಳಾರ ಸುಬ್ಬಯ್ಯ ಅವರಿಗೆ ನೀಡಿ ಗೌರವಿಸಲಾಗುವುದು. ಅಲ್ಲದೆ ಅಷ್ಟಮ ಸಂಭ್ರಮದ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ಎಂಟು ಕುಟುಂಬಗಳಿಗೆ ಒಂದು ತಿಂಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಯಕ್ಷಗಾನ ಕಲೆಯ ಉಳಿವು, ಮಕ್ಕಳ ಪ್ರತಿಭೆಗೆ ಉತ್ತೇಜನ ಹಾಗೂ ಸಮಾಜಸೇವೆಯನ್ನು ಒಟ್ಟುಗೂಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸುವಂತೆ ಅವರು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಯಶೋಧ, ಭಾರತಿ, ಹರಿಣಾಕ್ಷಿ, ಮಹಾಲಕ್ಷ್ಮಿ, ಮೋಕ್ಷಿತ್ ಪೂಜಾರಿ ಹಾಗೂ ಜಾನ್ವಿ ಮಾಲೆಮಾರ್ ಉಪಸ್ಥಿತರಿದ್ದರು.


