ಬಂಟ್ವಾಳ: ಆ. 9ರಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದಿಂದ ಹಿರಿಯರ ಚಿಂತನಾ ಸಮಾವೇಶ
ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ.), ಮೆಲ್ಲಾರ್–ಬಂಟ್ವಾಳ ವತಿಯಿಂದ ಹಿರಿಯರಿಗಾಗಿ ವಿಶೇಷ ‘ಹಿರಿಯರ ಚಿಂತನಾ ಸಮಾವೇಶ’ವನ್ನು ಆಗಸ್ಟ್ 9ರಂದು ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾದ ಪಾಣೆಮಂಗಳೂರಿನ ಹಳೆ ಸೇತುವೆ ಸಮೀಪದ ನೇತ್ರಾವತಿ ನದಿ ತಟದಲ್ಲಿರುವ ಶ್ರೀ ಭಯಂಕೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದ್ದಾರೆ.

ಈ ಕುರಿತು ಬಿಸಿರೋಡಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ನಾಗರಿಕರ ಆರೋಗ್ಯ, ಆಧ್ಯಾತ್ಮಿಕತೆ, ಸಾಮಾಜಿಕ ಬಾಂಧವ್ಯ ಹಾಗೂ ವಿಚಾರ ವಿನಿಮಯಕ್ಕೆ ವೇದಿಕೆಯಾಗುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 250ಕ್ಕೂ ಅಧಿಕ ಹಿರಿಯರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮವು ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಳ್ಳಲಿದೆ. ಗಣಹೋಮ, ರುದ್ರಾಭಿಷೇಕ, ರುದ್ರಪಠಣ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಬಳಿಕ ಗಮಕ ವಾಚನ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ವಿಚಾರಗಳ ಕುರಿತು ವ್ಯಾಖ್ಯಾನ, ಸಭಾ ಕಾರ್ಯಕ್ರಮ, ಸಾಧಕರಿಗೆ ಗೌರವಾರ್ಪಣೆ, ಯೋಗ ಪ್ರದರ್ಶನ ಹಾಗೂ ಹಿರಿಯರ ಚಿಂತನ–ಮಂಥನ ಕಾರ್ಯಕ್ರಮಗಳು ಜರುಗಲಿವೆ.

ಹಿರಿಯ ನಾಗರಿಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಸಮಾಜದ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸಲು ಹಾಗೂ ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯ ಬಗ್ಗೆ ಅರಿವು ಮೂಡಿಸಲು ಈ ಸಮಾವೇಶ ಉತ್ತಮ ವೇದಿಕೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಾದ ಜಯರಾಮ ಭಂಡಾರಿ, ಸುಬ್ರಾಯ ಮಡಿವಾಳ, ರಾಮ್ ಗಣೇಶ್ ಪ್ರಭು, ಸಂಕಪ್ಪ ಶೆಟ್ಟಿ, ಪ್ರಶಾಂತ ಹೊಳ್ಳ ಉಪಸ್ಥಿತರಿದ್ದು, ಜಿಲ್ಲೆಯ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

