ಮಂಗಳೂರು: ನಗರ ಸಿಸಿಬಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ದೆಹಲಿಯಿಂದ ಎಂಡಿಎಂಎ (MDMA) ಮಾದಕ ವಸ್ತುವನ್ನು ಮಂಗಳೂರಿಗೆ ಸಾಗಿಸಿ ಕರಾವಳಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು ₹5.20 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ಮಾದಕ ವಸ್ತು, ಒಂದು ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 25ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಬಂಧಿಸಿ, ಆತನಿಂದ ₹1.50 ಲಕ್ಷ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ಮಹತ್ವದ ಮಾಹಿತಿ ಲಭಿಸಿತ್ತು ಎಂದು ಹೇಳಿದರು.

ಈ ಸುಳಿವಿನ ಆಧಾರದಲ್ಲಿ ಜುಲೈ 15ರಂದು ಬೆಳ್ತಂಗಡಿ ತಾಲೂಕಿನ ಹುನಗುಂದ ಸಮೀಪದ ರಾಯಲ್ ಇನ್ ಲಾಡ್ಜ್ ಬಳಿ ಸಿಸಿಬಿ ತಂಡ ದಾಳಿ ನಡೆಸಿ, ಅಮೀನಾ ಮಂಜಿನ ಮೊಹಮ್ಮದ್ ಅಲ್ತಾಫ್ (28) ಹಾಗೂ ವಿವೇಕಾನಂದ ನಗರದ ಮೊಹಮ್ಮದ್ ಮುಸ್ತಫಾ (28) ಅವರನ್ನು ಬಂಧಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕಾರಿನ ಮೂಲಕ ದೆಹಲಿಯಿಂದ ಎಂಡಿಎಂಎ ಮಾದಕ ವಸ್ತುವನ್ನು ತಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತ ಮೊಹಮ್ಮದ್ ಅಲ್ತಾಫ್ ವಿರುದ್ಧ ಈ ಹಿಂದೆ 2024ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಹಾಗೂ 2026ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

ಈ ಕಾರ್ಯಾಚರಣೆಯ ಮೂಲಕ ಕರಾವಳಿ ಭಾಗದಲ್ಲಿ ಸಕ್ರಿಯವಾಗಿದ್ದ ಅಂತರರಾಜ್ಯ ಮಾದಕ ವಸ್ತು ಪೂರೈಕೆ ಜಾಲವನ್ನು ಭೇದಿಸುವಲ್ಲಿ ಸಿಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

