ನಾಗೋರಿ ಭೂಕುಸಿತ, ಸೋಮೇಶ್ವರ ಕಡಲುಕೊರೆತ ಪ್ರದೇಶಗಳಿಗೆ ಎಸ್.ಎಲ್. ಭೋಜೆಗೌಡ ಭೇಟಿ

ಮಂಗಳೂರು: ಮುಂಗಾರು ಮಳೆಯಿಂದ ಹಾನಿಗೊಳಗಾದ ದಕ್ಷಿಣ ಕನ್ನಡ ಜಿಲ್ಲೆಯ ನಾಗೋರಿ ಭೂಕುಸಿತ ಹಾಗೂ ಸೋಮೇಶ್ವರ ಕಡಲುಕೊರೆತ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಅಧ್ಯಯನ ತಂಡದ ಅಧ್ಯಕ್ಷ ಎಸ್.ಎಲ್. ಭೋಜೆಗೌಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ನಾಗೋರಿ ಭೂಕುಸಿತ ಪ್ರದೇಶದಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ಅವರು, ಮೃತರ ಕುಟುಂಬಗಳಿಗೆ ಸಾಂತ್ವನ ಸೂಚಿಸಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಭೂಕುಸಿತ ತಡೆಗೆ ಶಾಶ್ವತ ಕ್ರಮ, ವೈಜ್ಞಾನಿಕ ಅಧ್ಯಯನ ಹಾಗೂ ಅಪಾಯದ ಪ್ರದೇಶಗಳ ಗುರುತಿಸುವಿಕೆ ಅಗತ್ಯವೆಂದು ಅವರು ತಿಳಿಸಿದರು.

ಬಳಿಕ ಸೋಮೇಶ್ವರ ಬಟ್ಟಪಾಡಿ ಕಡಲುಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಅಧ್ಯಯನ ತಂಡವು ಸಮುದ್ರ ಅಲೆಗಳಿಂದ ಮನೆ, ರಸ್ತೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಉಂಟಾಗುತ್ತಿರುವ ಹಾನಿಯನ್ನು ಪರಿಶೀಲಿಸಿತು. ಕಡಲುಕೊರೆತ ತಡೆಗೆ ಶಾಶ್ವತ ತಡೆಗೋಡೆ ನಿರ್ಮಾಣ ಹಾಗೂ ಸಮುದ್ರ ಸಂರಕ್ಷಣಾ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.

ನಂತರ ಎಸ್.ಎಲ್. ಭೋಜೆಗೌಡ ನೇತೃತ್ವದ ತಂಡವು ಜಿಲ್ಲಾಧಿಕಾರಿ ದರ್ಶನ್ ಕವೇರಿ ಅವರಿಗೆ ಸಮಗ್ರ ಮನವಿ ಸಲ್ಲಿಸಿ, ವಿಕೋಪ ಪೀಡಿತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿತು.

ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿ, ಉಳಿದಿರುವ ಸಮಸ್ಯೆಗಳಿಗೂ ಆದ್ಯತೆ ನೀಡಿ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!