ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಭಾಷಾ ವಿಭಾಗಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಹಾಗೂ ಅವುಗಳನ್ನು ಹಂತ ಹಂತವಾಗಿ ಮುಚ್ಚುತ್ತಿರುವ ಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತೀವ್ರವಾಗಿ ಖಂಡಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಲತೇಶ್ ಬಾಕ್ರಬೈಲು, ಕರಾವಳಿ ಮತ್ತು ಮಲೆನಾಡು ಭಾಗದ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯವು ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರಬೇಕಾದ ಸಂಸ್ಥೆಯಾಗಿದ್ದು, ಇತ್ತೀಚಿನ ಆಡಳಿತಾತ್ಮಕ ನಿರ್ಧಾರಗಳು ಶೈಕ್ಷಣಿಕ ವಾತಾವರಣಕ್ಕೆ ಗಂಭೀರ ಧಕ್ಕೆ ಉಂಟುಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಳು, ಕೊಂಕಣಿ ಹಾಗೂ ಹಿಂದಿ ಸ್ನಾತಕೋತ್ತರ ವಿಭಾಗಗಳ ಪ್ರವೇಶ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ. ಜೊತೆಗೆ ಶುಲ್ಕ ಹೆಚ್ಚಳ ಹಾಗೂ ವಿದ್ಯಾರ್ಥಿಗಳ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಈ ವಿಭಾಗಗಳನ್ನು ಮುಚ್ಚುವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.
ಈ ವಿಭಾಗಗಳನ್ನು ನಗರ ಕೇಂದ್ರದಿಂದ ಸುಮಾರು 15ರಿಂದ 20 ಕಿಲೋಮೀಟರ್ ದೂರದಲ್ಲಿರುವ ವಿಶ್ವವಿದ್ಯಾನಿಲಯ ಆವರಣಕ್ಕೆ ಸ್ಥಳಾಂತರಿಸಿರುವುದರಿಂದ ವಿದ್ಯಾರ್ಥಿಗಳಿಗೆ ಸಂಚಾರ ಹಾಗೂ ವಿದ್ಯಾಭ್ಯಾಸದಲ್ಲಿ ತೀವ್ರ ಅನಾನುಕೂಲ ಉಂಟಾಗಿದೆ ಎಂದು ಅವರು ಹೇಳಿದರು.

ಒಡಿಯೂರು ಶ್ರೀಗುರುದೇವ ದತ್ತ ಸಂಸ್ಥಾನದ ಸಹಯೋಗದಲ್ಲಿ ಆರಂಭಗೊಂಡಿದ್ದ ತುಳು ಅಧ್ಯಯನ ಕೇಂದ್ರವನ್ನು ಮುಚ್ಚಿರುವುದು ತುಳು ಸೇರಿದಂತೆ ಭಾರತೀಯ ಭಾಷೆಗಳಿಗೆ ಮಾಡಿದ ಅವಮಾನವಾಗಿದೆ. ಕರಾವಳಿಯ ಮಾತೃಭಾಷೆಯಾಗಿರುವ ತುಳುವಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ಉಳಿವಿಲ್ಲದಂತಾಗಿರುವುದು ಅತ್ಯಂತ ವಿಷಾದನೀಯ ಬೆಳವಣಿಗೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ ಪಿಎಚ್.ಡಿ. ಪದವಿಗಳನ್ನು ನೀಡಿ ಸಮಾಜಕ್ಕೆ ಶಿಕ್ಷಕರು ಮತ್ತು ಸಂಶೋಧಕರನ್ನು ನೀಡಿದ್ದ ಯಶಸ್ವಿ ವಿಭಾಗಗಳನ್ನು ಮುಚ್ಚುವುದು ಭಾರತೀಯ ಭಾಷೆಗಳ ಬೆಳವಣಿಗೆಗೆ ದೊಡ್ಡ ಹೊಡೆತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯವು ತುಳು, ಕನ್ನಡ ಹಾಗೂ ಕೊಂಕಣಿ ಸೇರಿದಂತೆ ಭಾರತೀಯ ಭಾಷೆಗಳ ಅಧ್ಯಯನ, ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಉತ್ತೇಜನ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಆದ್ದರಿಂದ ವಿಶ್ವವಿದ್ಯಾನಿಲಯದ ಶೈಕ್ಷಣಿಕ ವ್ಯವಸ್ಥೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಮುಚ್ಚಲ್ಪಟ್ಟಿರುವ ಭಾರತೀಯ ಭಾಷಾ ಸ್ನಾತಕೋತ್ತರ ವಿಭಾಗಗಳನ್ನು ತಕ್ಷಣ ಪುನರಾರಂಭಿಸಬೇಕು. ವಿದ್ಯಾರ್ಥಿ ಸ್ನೇಹಿ ನೀತಿಗಳನ್ನು ಜಾರಿಗೊಳಿಸಿ, ಭಾರತೀಯ ಭಾಷೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಘನತೆಯನ್ನು ಮರುಸ್ಥಾಪಿಸಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಪದಾಧಿಕಾರಿಗಳಾದ ಗೀತಾ ಲಕ್ಷ್ಮೀಶ್, ಸುರೇಶ್ ಹಾಗೂ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.


