ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ. ಮೂಡ ಗ್ರಾಮದ ಮೊಡಂಕಾಪು ರಾಜೀವ ಪಲ್ಕೆಯ ನಿವಾಸಿ, ಶಂಭೂರಿನ ಎ.ಎಂ.ಆರ್. ಸಂಸ್ಥೆಯಿಂದ ಪಲ್ಲಮಜಲು ಗ್ರಿಡ್‌ಗೆ ವಿದ್ಯುತ್ ಸರಬರಾಜು ಮಾಡುವ ಹೆಚ್.ಟಿ. ಟೆನ್ಷನ್ ವಿದ್ಯುತ್ ತಂತಿ ತಗುಲಿ ದುರ್ಘಟನೆಯಲ್ಲಿ ಮೃತಪಟ್ಟ ಕೃಷ್ಣ ಕುಲಾಲ್ ಅವರ ನಿವಾಸಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮೃತರ ಕುಟುಂಬದವರನ್ನು ಭೇಟಿಯಾಗಿ ಅವರ ದುಃಖದಲ್ಲಿ ಭಾಗಿಯಾದ ಶಾಸಕರು, ಈ ದುರ್ಘಟನೆ ಅತ್ಯಂತ ನೋವುಂಟು ಮಾಡಿದ್ದು, ಕೃಷ್ಣ ಕುಲಾಲ್ ಅವರ ಅಕಾಲಿಕ ನಿಧನವು ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಸಂತಾಪ ಸೂಚಿಸಿದರು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮೃತರ ವಾರಸುದಾರರಿಗೆ ಕನಿಷ್ಠ ರೂ.5 ಲಕ್ಷ ಪರಿಹಾರ ಧನವನ್ನು ತಕ್ಷಣ ಮಂಜೂರು ಮಾಡುವಂತೆ ಸಂಬಂಧಪಟ್ಟ ಸಂಸ್ಥೆಗೆ ಪತ್ರ ಬರೆದು ಮನವಿ ಸಲ್ಲಿಸಿರುವುದಾಗಿ ಶಾಸಕರು ತಿಳಿಸಿದರು. ಮೃತರ ಪುತ್ರ ವಸಂತ್ ಅವರಿಗೆ ಧೈರ್ಯ ತುಂಬಿದ ಅವರು, ಕುಟುಂಬದೊಂದಿಗೆ ಸದಾ ನಾವಿದ್ದೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸುರೇಶ್ ಟೈಲರ್, ವಾಣಿ ಕೇಶವ ದೈಪಲ, ಉಮೇಶ್ ಕಾಮಾಜೆ, ಚಂದಪ್ಪ, ಭೋಜ ಸಾಲ್ಯಾನ್, ಗಿರೀಶ್, ಪ್ರಣಾಮ್ ಅಜ್ಜಿಬೆಟ್ಟು ಹಾಗೂ ಶ್ರಾವಣ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

