ಕೆಎಸ್‌ಒಯು ಪ್ರವೇಶಾತಿ ಆರಂಭ; ದೂರಶಿಕ್ಷಣಕ್ಕೆ ಅರ್ಜಿ ಆಹ್ವಾನ

ಮಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ದೂರಶಿಕ್ಷಣ ನೀಡಲು ರಾಜ್ಯದಲ್ಲಿ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾಲಯವಾಗಿದ್ದು, 2026-27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ವಿವಿಧ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಕುಲಪತಿ ಎ.ಪಿ. ಜ್ಞಾನಪ್ರಕಾಶ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 38 ಪ್ರಾದೇಶಿಕ ಕೇಂದ್ರಗಳು ಹಾಗೂ 118 ಕಲಿಕಾರ್ಥಿ ಸಹಾಯ ಕೇಂದ್ರಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಳೆದ 31 ವರ್ಷಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕೆಎಸ್‌ಒಯುನಿಂದ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿ ಪಡೆದಿದ್ದು, ವಿಶ್ವವಿದ್ಯಾಲಯದ ಪದವಿಗಳಿಗೆ ಯುಜಿಸಿ ಮಾನ್ಯತೆ ಹಾಗೂ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪದವಿಗಳಿಗೆ ಸಮಾನ ಮಾನ್ಯತೆ ಇದೆ ಎಂದು ತಿಳಿಸಿದರು.

ಜೂನ್ 22ರಿಂದ ಆರಂಭಗೊಂಡಿರುವ ಪ್ರವೇಶಾತಿಯಲ್ಲಿ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್‌ಡಬ್ಲ್ಯು., ಬಿ.ಎಸ್‌ಸಿ., ಎಂ.ಎ., ಎಂ.ಕಾಂ., ಎಂ.ಸಿ.ಎ., ಎಂ.ಬಿ.ಎ., ಎಂ.ಎಸ್‌ಸಿ., ಎಂ.ಎಸ್‌ಡಬ್ಲ್ಯು. ಸೇರಿದಂತೆ ವಿವಿಧ ಯುಜಿಸಿ ಅನುಮೋದಿತ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಕೆಎಸ್‌ಒಯುಗೆ ನ್ಯಾಕ್‌ನಿಂದ ‘ಎ ಪ್ಲಸ್’ (A+) ಶ್ರೇಣಿ ಲಭಿಸಿದ್ದು, ಎನ್‌ಐಆರ್‌ಎಫ್ (NIRF) ಶ್ರೇಯಾಂಕದಲ್ಲಿ ದೇಶದ ಮುಕ್ತ ವಿಶ್ವವಿದ್ಯಾಲಯಗಳ ಪೈಕಿ ಎರಡನೇ ಸ್ಥಾನ ಪಡೆದಿದೆ. ಉದ್ಯೋಗ ಮಾಡುತ್ತಲೇ ಉನ್ನತ ಶಿಕ್ಷಣ ಪಡೆಯಲು ಹಾಗೂ ಒಂದೇ ವೇಳೆ ಎರಡು ಪದವಿಗಳನ್ನು ಅಭ್ಯಾಸ ಮಾಡಲು ವಿಶ್ವವಿದ್ಯಾಲಯದಲ್ಲಿ ಅವಕಾಶವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡೀನ್ ಆನಂದ ಗೌಡ, ಪ್ರಾದೇಶಿಕ ನಿರ್ದೇಶಕರಾದ ಸ್ಮಿತಾ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!