ಮಂಗಳೂರು, ಜು. 31: ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಟ್ಯಾಬ್ಯುಲೇಶನ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆ ಮೂಲಕ ಗಣಕೀಕರಣಗೊಳಿಸಿದ್ದರಿಂದ ಪರೀಕ್ಷಾ ಫಲಿತಾಂಶಗಳನ್ನು ಶೀಘ್ರವಾಗಿ ಪ್ರಕಟಿಸಲು ಸಾಧ್ಯವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದ್ದಾರೆ.
2026ರ ಜೂನ್–ಜುಲೈ ತಿಂಗಳಲ್ಲಿ ನಡೆದ ಎಲ್ಲಾ ಪದವಿ ಕೋರ್ಸುಗಳ 6ನೇ ಸೆಮಿಸ್ಟರ್ ಹಾಗೂ ಬಿ.ಎಚ್.ಎಂ. ಕೋರ್ಸಿನ 8ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದೆ.

ಒಟ್ಟು 17,347 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 17,076 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ತಾಂತ್ರಿಕ ಕಾರಣಗಳಿಂದ 261 ವಿದ್ಯಾರ್ಥಿಗಳ ಫಲಿತಾಂಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ವಿದ್ಯಾರ್ಥಿಗಳು ಯುಯುಸಿಎಂಎಸ್ (UUCMS) ಪೋರ್ಟಲ್‌ನಲ್ಲಿ ತಮ್ಮ ಲಾಗಿನ್ ಐಡಿ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಉಳಿದಂತೆ ಎಲ್ಲಾ ಪದವಿ ಕೋರ್ಸುಗಳ 2ನೇ ಮತ್ತು 4ನೇ ಸೆಮಿಸ್ಟರ್‌ಗಳ ಹಾಗೂ ನಾನ್-ಎನ್‌ಇಪಿ ಕಾರ್ಯಕ್ರಮಗಳ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕುಲಪತಿ ತಿಳಿಸಿದ್ದಾರೆ.
ಮರುಮೌಲ್ಯಮಾಪನಕ್ಕೆ ಶೀಘ್ರದಲ್ಲೇ ಅರ್ಜಿ ಆಹ್ವಾನಿಸಿ ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು. ಮರುಮೌಲ್ಯಮಾಪನಕ್ಕೆ ಆಸಕ್ತ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಂಗಳೂರಿನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾಹಿತಿ ನೀಡಿದರು.


