ಉಡುಪಿ, ಆ. 1: ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ (Lakshmi Manjunath Kol) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರ ಮಧ್ಯಾಹ್ನ ಉಡುಪಿ ನಗರದ ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ಸರ್ಕಲ್‌ನಲ್ಲಿ ನಡೆದಿದೆ.


ಮೃತರಾದ ಲಕ್ಷ್ಮೀ ಮಂಜುನಾಥ್ ಕೊಳ ಅವರು ಬಿಜೆಪಿ ಮುಖಂಡ ಮಂಜು ಕೊಳ ಅವರ ಪತ್ನಿಯಾಗಿದ್ದು, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು.ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿ ಅಪಘಾತದ ಕುರಿತು ತನಿಖೆ ಆರಂಭಿಸಲಾಗಿದೆ.ಅಪಘಾತಕ್ಕೆ ನಿಖರ ಕಾರಣ ಹಾಗೂ ಇತರೆ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.


