ಕಾಸರಗೋಡು : ಮೋಸದ ಕೃತ್ಯವೊಂದು ಕುಂಬಳೆಯ ಖಾಸಗಿ ಸಂಸ್ಥೆಯೊಂದರಲ್ಲಿ ಬೆಳಕಿಗೆ ಬಂದಿದೆ. ಕೆಲಸ ಮಾಡುವ ಸ್ಥಳದಲ್ಲಿ ಯುವತಿಯೊಬ್ಬಳು ಕುಡಿಯಲು ಬಳಸುತ್ತಿದ್ದ ನೀರಿನ ಬಾಟಲಿಯಲ್ಲಿ ಮೂತ್ರ ತುಂಬಿಸಿಟ್ಟ ಗಂಭೀರ ಆರೋಪದ ಮೇಲೆ ಸಹೋದ್ಯೋಗಿಗಳಾದ ವೈಶಾಖ್ ಮತ್ತು ಎಬಿನ್ ಎಂಬುವವರ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಹ್ರಾಜೆ ನಿವಾಸಿ 30 ವರ್ಷದ ಯುವತಿ ನೀಡಿದ ದೂರಿನನ್ವಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಜುಲೈ 25ರ ಸಂಜೆ ಹಾಗೂ 27ರ ಬೆಳಗಿನ ಅವಧಿಯ ನಡುವೆ ಈ ಕೃತ್ಯ ಎಸಗಲಾಗಿದೆ.

ಮಾರಣಾಂತಿಕ ರೋಗಗಳು ಹರಡುವ ಅಪಾಯವಿದೆಯೆಂಬ ಅರಿವಿದ್ದರೂ ಆರೋಪಿಗಳು ಈ ವಿಕೃತ ಕೃತ್ಯವೆಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು, ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

