ಮೂಡುಬಿದಿರೆಯಲ್ಲಿ ಆ.9ರಂದು ಈಶ ಗ್ರಾಮೋತ್ಸವ 2026ರ ಕರ್ನಾಟಕ ವಿಭಾಗೀಯ ಪಂದ್ಯಾವಳಿ

ಮೂಡುಬಿದಿರೆ: ಈಶ ಗ್ರಾಮೋತ್ಸವ 2026ರ 18ನೇ ಆವೃತ್ತಿಯ ಕರ್ನಾಟಕ ವಿಭಾಗೀಯ ಪಂದ್ಯಾವಳಿಗಳು ಆ.9ರಂದು ಮೂಡುಬಿದಿರೆಯಲ್ಲಿ ಬೆಳಿಗ್ಗೆ 9.30ಕ್ಕೆ ಗಣ್ಯರ ಸಮುಖದಲ್ಲಿ ಸ್ವರಾಜ್ ಮೈದಾನ ಪಬ್ಲಿಕ್ ಗ್ರೌಂಡ್‌ನಲ್ಲಿ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದು ಈಶ ಫೌಂಡೇಶನ್‌ನ ಮಾಧ್ಯಮ ಸಂಯೋಜಕಿ ಲತಾ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈಶ ಔಟ್‌ರೀಚ್ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ 18 ಪುರುಷರ ವಾಲಿಬಾಲ್ ತಂಡಗಳು ಹಾಗೂ 12 ಮಹಿಳೆಯರ ಥ್ರೋಬಾಲ್ ತಂಡಗಳ 300ಕ್ಕೂ ಅಧಿಕ ಗ್ರಾಮೀಣ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಹಾಗೂ ಕ್ರೀಡೆಯ ಮೂಲಕ ಸಮುದಾಯದ ಬಾಂಧವ್ಯವನ್ನು ಬಲಪಡಿಸುವುದು ಗ್ರಾಮೋತ್ಸವದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆ ಜೈನ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಧನಲಕ್ಷ್ಮಿ ಕ್ಯಾಶೂಸ್ ಮಾಲೀಕ ಶ್ರೀಪತಿ ಭಟ್, ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಎಸ್. ಮುಂಡಲಮನಿ, ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ನಿಶ್ಮಿತಾ ಟವರ್ಸ್ ಮಾಲೀಕ ನಾರಾಯಣ ಎಂ. ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

40 ಸಾವಿರಕ್ಕೂ ಅಧಿಕ ಗ್ರಾಮಗಳ ತಲುಪುವ ಗುರಿ

ಈ ವರ್ಷದ ಗ್ರಾಮೋತ್ಸವವು ಹಿಂದಿನ ಆವೃತ್ತಿಗಳಿಗಿಂತ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, 10 ರಾಜ್ಯಗಳು ಹಾಗೂ ಪುದುಚೇರಿ ಸೇರಿದಂತೆ 40 ಸಾವಿರಕ್ಕೂ ಅಧಿಕ ಗ್ರಾಮಗಳನ್ನು ತಲುಪುವ ಗುರಿ ಹೊಂದಿದೆ. ಸುಮಾರು 7 ಸಾವಿರ ತಂಡಗಳ ಮೂಲಕ 80 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಇವರಲ್ಲಿ ಸುಮಾರು 15 ಸಾವಿರ ಮಹಿಳಾ ಆಟಗಾರರು ಇರಲಿದ್ದಾರೆ.

ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಪುದುಚೇರಿಯ ಜೊತೆಗೆ ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರಗಳಿಗೂ ಈ ಬಾರಿ ಗ್ರಾಮೋತ್ಸವ ವಿಸ್ತರಿಸಿದೆ.

ರಾಷ್ಟ್ರೀಯ ಫೈನಲ್‌ಗೆ ಅರ್ಹತಾ ಸುತ್ತು

ಕರ್ನಾಟಕ ವಿಭಾಗೀಯ ಪಂದ್ಯಗಳು ರಾಷ್ಟ್ರೀಯ ಫೈನಲ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ತಂಡಗಳ ಆಯ್ಕೆಗೆ ಪ್ರಮುಖ ಅರ್ಹತಾ ಸುತ್ತಾಗಿವೆ. ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಗಳು ಕ್ಲಸ್ಟರ್, ವಿಭಾಗೀಯ ಮತ್ತು ಅಂತಿಮ ಹಂತಗಳಲ್ಲಿ ನಡೆಯಲಿವೆ.

ವೃತ್ತಿಪರ ಆಟಗಾರರನ್ನು ಸ್ಪರ್ಧೆಯಿಂದ ಹೊರಗಿಟ್ಟು ಗ್ರಾಮೀಣ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಅನುಭವ ನೀಡುವುದು ಗ್ರಾಮೋತ್ಸವದ ವಿಶೇಷತೆಯಾಗಿದೆ. ಕಳೆದ ಎರಡು ದಶಕಗಳಲ್ಲಿ ಈಶ ಗ್ರಾಮೋತ್ಸವವು 35 ಸಾವಿರಕ್ಕೂ ಅಧಿಕ ಗ್ರಾಮಗಳ 2.6 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕ್ರೀಡಾಪಟುಗಳನ್ನು ತಲುಪಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕ್ರೀಡೆಯ ಮೂಲಕ ಗ್ರಾಮೀಣ ಸಮುದಾಯಗಳನ್ನು ಒಗ್ಗೂಡಿಸುವುದು ಹಾಗೂ ಯುವಜನರಲ್ಲಿ ಉತ್ಸಾಹ, ಆರೋಗ್ಯ ಮತ್ತು ಸಕಾರಾತ್ಮಕ ಮನೋಭಾವ ಬೆಳೆಸುವುದು ಗ್ರಾಮೋತ್ಸವದ ಉದ್ದೇಶವಾಗಿದೆ. ಈಶ ಫೌಂಡೇಶನ್‌ನ ಸಾಮಾಜಿಕ ಚಟುವಟಿಕೆಗಳ ವಿಭಾಗವಾಗಿರುವ ಈಶ ಔಟ್‌ರೀಚ್ ಗ್ರಾಮೀಣ ಪುನರುಜ್ಜೀವನ, ಶಿಕ್ಷಣ, ಪರಿಸರ ಸುಸ್ಥಿರತೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳನ್ನು ನಡೆಸುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಸದಸ್ಯರಾದ ಹರ್ಷಾ, ಶ್ರೀಧರ್ ಹಾಗೂ ದೀಪಕ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!