ಮಂಜೇಶ್ವರ: ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾಸ್ಕರ ನಗರದಲ್ಲಿ ಏಳು ವರ್ಷದ ಬಾಲಕನನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಲಾಗಿದೆ.

ಉತ್ತರ ಭಾರತ ಮೂಲದ ಕುಟುಂಬವು ಇಲ್ಲಿನ ಕ್ವಾರ್ಟಸ್ನಲ್ಲಿ ವಾಸವಿದ್ದು, ಮಧ್ಯಾಹ್ನ ಅಂಗನವಾಡಿಯಿಂದ ಉಚಿತ ಆಹಾರ ಧಾನ್ಯ ಪಡೆದು ಮಗುವೊಂದು ಮನೆಗೆ ಮರಳುತ್ತಿತ್ತು.
ಆಗ ದಾರಿಮಧ್ಯೆ ಬಂದ ಕಾರೊಂದರಲ್ಲಿ ಮಾಸ್ಕ್ ಧರಿಸಿದ್ದ ಇಬ್ಬರು ಅಪರಿಚಿತರು, ಮನೆಗೆ ಬಿಡುವುದಾಗಿ ನಂಬಿಸಿ ಬಾಲಕನನ್ನು ಬಲವಂತವಾಗಿ ಕಾರಿಗೆ ಹತ್ತಿಸಲು ಯತ್ನಿಸಿದ್ದಾರೆನ್ನಲಾಗಿದೆ.

ಆದರೆ ಎಚ್ಚೆತ್ತ ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಯಗೊಂಡ ಮಗು ಆರಂಭದಲ್ಲಿ ವಿಷಯ ಯಾರಿಗೂ ತಿಳಿಸದೆ ಮೌನವಾಗಿತ್ತು.
ತಂದೆ ವಿಚಾರಿಸಿದಾಗ ಅಸಲಿ ವಿಷಯ ಬಯಲಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

