ಪೊಸೋಟಿನಲ್ಲಿ ಭೀಕರ ಅಪಘಾತ; ಡಿವೈಡರ್‌ಗೆ ಬಸ್ ಡಿಕ್ಕಿ, 12 ಪ್ರಯಾಣಿಕರಿಗೆ ಗಾಯ

ಮಂಜೇಶ್ವರ: ನಿಯಮ ಉಲ್ಲಂಘಿಸಿ ಸರ್ವೀಸ್ ರಸ್ತೆಯನ್ನು ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ಸಾಗುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸೊಂದು ಭಾನುವಾರ ಮಧ್ಯಾಹ್ನ ಪೊಸೋಟು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

​ಕಾಸರಗೋಡಿನಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಡಿಕ್ಕಿಯ ರಭಸಕ್ಕೆ ಡಿವೈಡರ್ ಸಂಪೂರ್ಣ ನುಚ್ಚುನೂರಾಗಿದ್ದು, ಬಸ್ ಎದುರು ಭಾಗದ ರಸ್ತೆಗೆ ಮುಖಮಾಡಿ ನಿಂತಿದೆ.

ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್‌ನಲ್ಲಿದ್ದ ಸುಮಾರು 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಆ ಸಮಯದಲ್ಲಿ ಎದುರು ಭಾಗದಿಂದ ಬೇರೆ ಯಾವುದೇ ವಾಹನಗಳು ಬಾರದಿದಿದ್ದರಿಂದ ದೊಡ್ಡ ಪ್ರಮಾಣದ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

​ಕರ್ನಾಟಕ ಮತ್ತು ಕೇರಳ ಸಾರಿಗೆ ಬಸ್ಸುಗಳ ಚಾಲಕರು ನಿತ್ಯವೂ ಕಾನೂನುಗಳನ್ನು ಗಾಳಿಗೆ ತೂರಿ, ಪೈಪೋಟಿಯಲ್ಲಿ ಸರ್ವೀಸ್ ರಸ್ತೆಗಳನ್ನು ಬಳಸದೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಅಪಾಯಕಾರಿಯಾಗಿ ವಾಹನ ಚಲಾಯಿಸುವುದು ಸರ್ವೇಸಾಮಾನ್ಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಬೇಜವಾಬ್ದಾರಿ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!