ಮಂಗಳೂರು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ರಿ.) ಮಂಗಳಾದೇವಿ ವಲಯ ಸಮಿತಿಯ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ.
ಮಂಗಳೂರು, ಆ.9: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ರಿ.) ಮಂಗಳಾದೇವಿ ವಲಯ ಸಮಿತಿಯ ವತಿಯಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಭಾನುವಾರ ಮಂಗಳಾದೇವಿ ದೇವಸ್ಥಾನದ ಬಳಿಯ ಕಾಂತಿ ಚರ್ಚ್ ಹಾಲ್ನಲ್ಲಿ ನಡೆಯಿತು.


ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಶಾಂತ್ ಕುಮಾರ್ ಕಲ್ಲೂರು, ಆಟಿ ತಿಂಗಳು ಕರಾವಳಿಯ ಜನಜೀವನದಲ್ಲಿ ಕಷ್ಟದ ಕಾಲವಾಗಿದ್ದರೂ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ ಎಂದರು.

ಕರಾವಳಿಯಲ್ಲಿ ಆಟಿ ತಿಂಗಳಲ್ಲಿ ನಿರಂತರ ಹಾಗೂ ಭಾರಿ ಮಳೆಯಾಗುತ್ತಿತ್ತು. ಭತ್ತದ ನಾಟಿ ಕಾರ್ಯ ಮುಗಿದ ಬಳಿಕ ರೈತರು ಕೃಷಿ ಚಟುವಟಿಕೆಗಳಿಂದ ಕೊಂಚ ಬಿಡುವು ಪಡೆಯುತ್ತಿದ್ದ ಸಂದರ್ಭದಲ್ಲಿ ಹೊಸ ಬೆಳೆ ಕೈಗೆ ಸಿಗುತ್ತಿರಲಿಲ್ಲ. ಹಳೆಯ ಧಾನ್ಯಗಳ ದಾಸ್ತಾನು ಕೂಡ ಕಡಿಮೆಯಾಗುತ್ತಿದ್ದುದರಿಂದ ಕೃಷಿಕ ಕುಟುಂಬಗಳು ಆಹಾರ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ಅವರು ವಿವರಿಸಿದರು.
ಹಿಂದಿನ ಕಾಲದಲ್ಲಿ ರಾಸಾಯನಿಕ ಬಳಕೆಯಿಲ್ಲದೆ ಸಾವಯವ ರೀತಿಯಲ್ಲಿ ಕೃಷಿ ನಡೆಸಲಾಗುತ್ತಿತ್ತು. ಆದರೆ ಇಂದು ವಿಷಕಾರಿ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹಿಂದಿನ ಕಾಲದ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಗೋವಿಂದಾಸ್ ಕಾಲೇಜಿನ ಉಪನ್ಯಾಸಕಿ ಹಾಗೂ ನಿರೂಪಕಿ ಅಕ್ಷತಾ ವಿ. ಮಾತನಾಡಿ, ಹಿಂದಿನ ಕಾಲದಲ್ಲಿ ಕೂಡು ಕುಟುಂಬ ವ್ಯವಸ್ಥೆ ಇದ್ದು, ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಜೀವನ ನಡೆಸುತ್ತಿದ್ದರು. ಇಂದಿನ ದಿನಗಳಲ್ಲಿ ಕುಟುಂಬದ ಕಾರ್ಯಕ್ರಮಗಳ ಸಂದರ್ಭದಲ್ಲಷ್ಟೇ ಎಲ್ಲರೂ ಒಂದೆಡೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ತುಳುನಾಡು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದ ನೆಲೆಯಾಗಿದ್ದು, ಇಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಬದುಕಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಆಟಿ ತಿಂಗಳಲ್ಲಿ ಹಿಂದೆ ಮಳೆಯ ಪ್ರಮಾಣ ತೀವ್ರವಾಗಿದ್ದರಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುವುದಕ್ಕೂ ಹಲವು ಕಷ್ಟಗಳನ್ನು ಎದುರಿಸಬೇಕಾಗಿತ್ತು. ಹಿಂದಿನ ಕಾಲದ ಸಾವಯವ ಆಹಾರ ಪದ್ಧತಿಯಿಂದ ಜನರು ದೀರ್ಘಾಯುಷ್ಯ ಹೊಂದಿದ್ದರು. ಆದರೆ ಇಂದಿನ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರಿಕೆ.
ಮಂಗಳೂರು ನಗರ ಸಂಚಾರ ಉಪವಿಭಾಗದ ಎಸಿಪಿ ನಜ್ಮ ಫಾರೂಕಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಉತ್ತಮ ಸಂದೇಶ ನೀಡುತ್ತವೆ ಎಂದರು.
ಇತ್ತೀಚಿನ ದಿನಗಳಲ್ಲಿ ದರೋಡೆ ಹಾಗೂ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಒಂಟಿಯಾಗಿ ವಾಸಿಸುವ ಮಹಿಳೆಯರ ಮನೆಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಉಪಯುಕ್ತ ಎಂದು ಸಲಹೆ ನೀಡಿದರು.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಯಾವುದೇ ಕರೆ ಬಂದರೂ ಭಯಪಡದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಬ್ಯಾಂಕ್ ಖಾತೆಗಳ ವಹಿವಾಟಿನ ಮೇಲೆ ನಿಗಾ ಇಡಬೇಕು ಎಂದು ಮನವರಿಕೆ ಮಾಡಿದರು.
ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳ ಸುರಕ್ಷತೆಯ ಬಗ್ಗೆಯೂ ಪೋಷಕರು ಎಚ್ಚರ ವಹಿಸಬೇಕು. ಖಾಸಗಿ ವ್ಯಾನ್ಗಳು, ವೈಟ್ ಬೋರ್ಡ್ ಹಾಗೂ ಯೆಲ್ಲೋ ಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸೂಕ್ತ ನಿಯಮಗಳು ಮತ್ತು ವಿಮಾ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.

ರಸ್ತೆ ಸುರಕ್ಷತೆ ಕುರಿತು ಮಾತನಾಡಿದ ಅವರು, ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಪೋಷಕರು ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿ ಪಾಲಿಸಬೇಕು. ಮಹಿಳೆಯರು ದ್ವಿಚಕ್ರ ವಾಹನ ಚಲಾಯಿಸುವಾಗ ಕೈಯಲ್ಲಿ ಹ್ಯಾಂಡ್ಬ್ಯಾಗ್ ಹಿಡಿದುಕೊಂಡು ಹೋಗುವುದರಿಂದ ಅಪಘಾತದ ಅಪಾಯ ಹೆಚ್ಚಾಗಬಹುದು. ಆದ್ದರಿಂದ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎಸಿಪಿ ನಜ್ಮ ಫಾರೂಕಿ ಅವರನ್ನು ಸ್ವಾಗತಿಸಲಾಯಿತು. ನಾಗರಾಜ್ ಬಜಾಲ್ ಅವರನ್ನು ಸನ್ಮಾನಿಸಲಾಯಿತು. ಜಯಪ್ರಕಾಶ್, ಈಶ್ವರ್ ಹಾಗೂ ನಾಗೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು. ಟೈಲರ್ಸ್ ಅಸೋಸಿಯೇಷನ್ನ ಸದಸ್ಯರನ್ನು ಸ್ವಾಗತಿಸಲಾಯಿತು.
ರೋಹಿತ್ ಉಳ್ಳಾಲ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೆ ರಾಜೇಶ್ವರಿ, ಸುರೇಶ್ ಸಾಲ್ಯಾನ್, ಹರೀಶ್ ರೈ, ಜಯಂತ್ ಉರ್ಲಾಡಿ, ನಳಿನಿ ಸದಾಶಿವ, ಹರೀನಾಕ್ಷಿ ಸುಜಾತಾ ಜೋಗಿ, ಪೂರ್ಣಿಮಾ, ಸಬೀತ, ಅಶೋಕ,ಅನಂತರಾಮ ,ಪ ದ್ಮನಾಭ ಜಲ್ಲಿಗುಡ್ಡ,ಸೀತಾ ರಾಮ ಸೇರಿದಂತೆ KSTA ಮಂಗಳಾದೇವಿ ವಲಯದ ಸರ್ವ ಸದಸ್ಯರು ಉಪಸ್ಥಿತರಿದ್ದರು.

