ಸೆ. 3, 4ರಂದು ಪಿಲಿಕುಳದಲ್ಲಿ ಇಸ್ಕಾನ್ ಮಂಗಳೂರಿನ ಜನ್ಮಾಷ್ಟಮಿ ಮಹೋತ್ಸವ

ಮಂಗಳೂರು: ಇಸ್ಕಾನ್ ಮಂಗಳೂರು ವತಿಯಿಂದ ಜನ್ಮಾಷ್ಟಮಿ ಮಹೋತ್ಸವವನ್ನು ಸೆಪ್ಟೆಂಬರ್ 3 ಮತ್ತು 4ರಂದು ಪಿಲಿಕುಳದ ಸ್ಕೌಟ್ ಭವನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ.

ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಇಸ್ಕಾನ್ ಮಂಗಳೂರು ಅಧ್ಯಕ್ಷ *ಶ್ರೀ ಗುಣಕರ ರಾಮ ದಾಸ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ *ಡಾ. ಎಂ. ಮೋಹನ್ ಆಳ್ವ, ಬಂಟರಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ , ಕಾಂಗ್ರೆಸ್ ಮುಖಂಡ ವಿಥುನ್ ಕುಮಾರ್ ರೈ, ಬಿಜೆಪಿ ದಕ್ಷಿಣ ಕನ್ನಡ ಅಧ್ಯಕ್ಷ ಸತೀಶ್ ಕುಂಪಲ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಹೋತ್ಸವದ ಅಂಗವಾಗಿ ಎರಡೂ ದಿನ ಸಂಜೆ 6 ಗಂಟೆಯಿಂದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ ಹಾಗೂ ಭಕ್ತಿ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಡೆಯುವ ಅಂತರಾಷ್ಟ್ರೀಯ ಭಜನಾ ಕ್ಲಬ್ಬಿಂಗ್ನಲ್ಲಿ ಐದು ವಿವಿಧ ದೇಶಗಳ ಭಕ್ತಿಗೀತಾ ಕಲಾವಿದರು ಭಾಗವಹಿಸಿ ಭಜನೆ ಹಾಗೂ ಕೀರ್ತನೆಗಳನ್ನು ನಡೆಸಿಕೊಡಲಿದ್ದಾರೆ. ಇದಲ್ಲದೆ, ಶ್ರೀಕೃಷ್ಣ ಬಲರಾಮರಿಗೆ ಪಂಚಾಮೃತ ಸೇರಿದಂತೆ ವಿವಿಧ ದ್ರವ್ಯಗಳಿಂದ ಮಹಾ ಅಭಿಷೇಕ ನೆರವೇರಿಸಲಾಗುವುದು.

ಜನ್ಮಾಷ್ಟಮಿ ಪ್ರಯುಕ್ತ ಈಗಾಗಲೇ 5,000 ಹರಿನಾಮ ಪುಸ್ತಕಗಳನ್ನು ಮನೆಗಳಿಗೆ ವಿತರಿಸಲಾಗಿದ್ದು, ಕುಟುಂಬಗಳು ಪುಸ್ತಕದಲ್ಲಿ ‘ಹರೇ ಕೃಷ್ಣ ಮಹಾಮಂತ್ರ’ ಬರೆದು ಜನ್ಮಾಷ್ಟಮಿ ದಿನ ಶ್ರೀಕೃಷ್ಣನಿಗೆ ಅರ್ಪಿಸುವ ಅವಕಾಶ ಕಲ್ಪಿಸಲಾಗಿದೆ.

ಎರಡೂ ದಿನ ಮಹಾ ಆಹಾರ ಮೇಳ ಆಯೋಜಿಸಲಾಗಿದ್ದು, ವಿವಿಧ ಪ್ರಸಾದ ಕೌಂಟರ್‌ಗಳಲ್ಲಿ ಸಾತ್ವಿಕ ಭೋಜನ ವ್ಯವಸ್ಥೆ ಇರಲಿದೆ. ಭಕ್ತರು ಹಾಗೂ ಸಾರ್ವಜನಿಕರು ಕೃಷ್ಣ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ. ಕೃಷ್ಣ ಗಿಫ್ಟ್ ಸೆಂಟರ್ನಲ್ಲಿ ದೇವತಾ ಪರಿಕರಗಳು, ಧಾರ್ಮಿಕ ಪುಸ್ತಕಗಳು, ಬಟ್ಟೆಗಳು ಹಾಗೂ ವಿವಿಧ ಸ್ಮರಣಿಕೆಗಳು ಲಭ್ಯವಿರಲಿವೆ.

ಮಕ್ಕಳು ಹಾಗೂ ವಿದ್ಯಾರ್ಥಿಗಳಿಗಾಗಿ 1ನೇ ತರಗತಿಯಿಂದ ಕಾಲೇಜು ಹಂತದವರೆಗೆ ಕ್ವಿಜ್, ಚಿತ್ರಕಲೆ, ಶ್ಲೋಕ ಪಠಣ ಹಾಗೂ ಕೃಷ್ಣ ಲೀಲಾಧಾರಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಹೋತ್ಸವಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಎರಡೂ ದಿನ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಇಸ್ಕಾನ್ ಕಲಾಕುಂಜದಿಂದ ಸ್ಕೌಟ್ ಭವನ, ಪಿಲಿಕುಳಕ್ಕೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ 10 ನಿಮಿಷಕ್ಕೊಮ್ಮೆ ಎರಡೂ ಕಡೆಗಳಿಗೆ ಬಸ್ ಸಂಚಾರ ಇರಲಿದೆ.

ಭಕ್ತಿ, ಸಂಸ್ಕೃತಿ, ಶಿಕ್ಷಣ ಹಾಗೂ ಸೇವೆಯನ್ನು ಒಳಗೊಂಡ ಸಮುದಾಯೋತ್ಸವವಾಗಿ ಜನ್ಮಾಷ್ಟಮಿ ಮಹೋತ್ಸವವನ್ನು ಆಚರಿಸುವ ಇಸ್ಕಾನ್ ಮಂಗಳೂರಿನ ಪ್ರಯತ್ನವನ್ನು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಶ್ಲಾಘಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಕರೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!