ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವಿಗಾಗಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಿರಂತರ ಹೋರಾಟಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ವಳಾಲ್ ಟೋಲ್ ಗೇಟ್ ಕಾರ್ಯಾರಂಭ ಮಾಡಿದ ತಕ್ಷಣ ಬ್ರಹ್ಮರಕೊಟ್ಲು ಟೋಲ್ ಗೇಟ್ ಬಂದ್ ಮಾಡಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಇದೀಗ ವಳಾಲ್ ಟೋಲ್ ಗೇಟ್ನಲ್ಲಿ ಶುಲ್ಕ ವಸೂಲಿ ಆರಂಭವಾಗಿದ್ದರೂ ಬ್ರಹ್ಮರಕೊಟ್ಲು ಟೋಲ್ ಗೇಟ್ ಇನ್ನೂ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ. ಸಂಸದರು ತಕ್ಷಣ ಮಧ್ಯಪ್ರವೇಶಿಸಿ ತಮ್ಮ ಭರವಸೆಯಂತೆ ಬ್ರಹ್ಮರಕೊಟ್ಲು ಟೋಲ್ ಗೇಟ್ ಅನ್ನು ಬಂದ್ ಮಾಡಿಸಬೇಕು ಅಥವಾ ಶಾಶ್ವತವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

ಒಂದು ವೇಳೆ ಸಂಸದರಿಂದ ಇದು ಸಾಧ್ಯವಾಗದಿದ್ದರೆ, ಜಿಲ್ಲೆಯ ಎಂಟು ಶಾಸಕರು ಪಕ್ಷಭೇದ ಮರೆತು ಬ್ರಹ್ಮರಕೊಟ್ಲು ಟೋಲ್ ಗೇಟ್ ಎದುರು ಪ್ರತಿಭಟನೆ ನಡೆಸಬೇಕು. ಜನರ ಸಮಸ್ಯೆಗಳಿಗಾಗಿ ಧ್ವನಿ ಎತ್ತುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ.
ಪ್ರತಿಬಾರಿಯೂ ಜನಸಾಮಾನ್ಯರೇ ಬೀದಿಗಿಳಿದು ಪ್ರತಿಭಟನೆ ನಡೆಸುವ ಬದಲು, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳೇ ಜನರ ಪರವಾಗಿ ಹೋರಾಟಕ್ಕೆ ಇಳಿಯಬೇಕು. ಈ ಮೂಲಕ ಬ್ರಹ್ಮರಕೊಟ್ಲು ಟೋಲ್ ತೆರವಿನ ನ್ಯಾಯಯುತ ಹೋರಾಟದಲ್ಲಿ ನಾವು ಜನರೊಂದಿಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ನೀಡಬೇಕು.
ಜನರ ನ್ಯಾಯಯುತ ಬೇಡಿಕೆಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕಿನ ಮೂಲಕ ಜನಪ್ರತಿನಿಧಿಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ.
ಎಂದು ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ಸಿರಾಜ್ ಬಜ್ಪೆ ಆಗ್ರಹಿಸಿದ್ದಾರೆ.

