ಕಾಸರಗೋಡು : ಕೇರಳ ಸರಕಾರವು ಜಾರಿಗೆ ತಂದ ‘ಪ್ರಿಯದರ್ಶಿನಿ’ ಉಚಿತ ಮಹಿಳಾ ಪ್ರಯಾಣ ಯೋಜನೆಯಿಂದಾಗಿ ರಾಜ್ಯದ ಖಾಸಗಿ ಬಸ್ ಉದ್ಯಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಬಿಕ್ಕಟ್ಟಿನಿಂದ ಪಾರಾಗಲು ಖಾಸಗಿ ಬಸ್ಗಳನ್ನು ಬಾಡಿಗೆ ಗುತ್ತಿಗೆ ಆಧಾರದ ಮೇಲೆ ಕೆಎಸ್ಆರ್ಟಿಸಿ ವ್ಯಾಪ್ತಿಗೆ ಪಡೆದುಕೊಂಡು ಕಾರ್ಯಾಚರಣೆ ನಡೆಸುವಂತೆ ‘ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್’ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಸಾರಿಗೆ ಸಂಸ್ಥೆಯ ಹೆಸರಿನಲ್ಲೇ ಈ ಬಸ್ಗಳು ರಸ್ತೆಗೆ ಇಳಿದರೆ ನಷ್ಟದಲ್ಲಿರುವ ಮಾಲೀಕರಿಗೆ ಆಸರೆಯಾಗಲಿದೆ ಎಂಬುದು ಸಂಘಟನೆಯ ಆಶಯ.

ಈ ಪ್ರಸ್ತಾಪಕ್ಕೆ ಬಸ್ ಮಾಲೀಕರೂ ಸಮ್ಮತಿಸಿದ್ದು, ಸರಕಾರಕ್ಕೆ ಅಧಿಕೃತ ಪತ್ರ ರವಾನಿಸಿದ್ದಾರೆ. ಸರಕಾರವೇ ಈ ವಾಹನಗಳನ್ನು ವಹಿಸಿಕೊಂಡು ಸಾರ್ವಜನಿಕ ಸೇವೆಗೆ ಬಳಸಿಕೊಂಡರೆ ಮಾತ್ರ ಖಾಸಗಿ ಸಾರಿಗೆ ಕ್ಷೇತ್ರವನ್ನು ವಿನಾಶದಿಂದ ಉಳಿಸಲು ಸಾಧ್ಯ ಎಂಬ ಬೇಡಿಕೆಯನ್ನು ಅವರ ಮುಂದಿಡಲಾಗಿದೆ.

ಈ ಹಿನ್ನೆಲೆಯಲ್ಲಿ ಶೀಘ್ರವೇ ಖಾಸಗಿ ಬಸ್ಗಳು ಕೆಎಸ್ಆರ್ಟಿಸಿ ಫಲಕದೊಂದಿಗೆ ರಸ್ತೆಗಿಳಿಯುವ ಸಾಧ್ಯತೆಯಿದೆ.

