ಮಂಗಳೂರಿನಲ್ಲಿ 100 ವಾರಗಳ ‘ನಶಾ ಮುಕ್ತ ಯುವ’ ಅಭಿಯಾನಕ್ಕೆ ಚಾಲನೆ

ಮಂಗಳೂರು: ಯುವಜನತೆಯನ್ನು ಮಾದಕ ವ್ಯಸನದಿಂದ ದೂರವಿರಿಸಿ, ಆರೋಗ್ಯಕರ ಹಾಗೂ ಸಶಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಮೈ ಭಾರತ್ (ದಕ್ಷಿಣ ಕನ್ನಡ) ಮತ್ತು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ (ಸ್ವಾಯತ್ತ) ಎನ್‌ಎಸ್‌ಎಸ್ ಘಟಕ ಹಾಗೂ ಮಹಿಳಾ ಕೋಶದ ಸಹಯೋಗದಲ್ಲಿ ‘ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ–ರಾಷ್ಟ್ರೀಯ ಸಂಕಲ್ಪ ಸಮಾರೋಹ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸೇಂಟ್ ಆಗ್ನೆಸ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 100 ವಾರಗಳ ‘ನಶಾ ಮುಕ್ತ ಯುವ ಅಭಿಯಾನ’ಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಮಾದಕ ವ್ಯಸನದ ಅಪಾಯಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವುದು, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ‘ವಿಕಸಿತ ಭಾರತ @2047’ ಪರಿಕಲ್ಪನೆಗೆ ಯುವಜನತೆಯ ಕೊಡುಗೆಯನ್ನು ಹೆಚ್ಚಿಸುವುದು ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ.

ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನೋರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಅರುಣಾ ಯಡಿಯಾಳ್ ಅವರು ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ಗಂಭೀರ ಮಾನಸಿಕ ಹಾಗೂ ನರಮಂಡಲದ ಹಾನಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಾದಕ ವ್ಯಸನಕ್ಕೆ ಬಲಿಯಾಗದೆ, ಮುಂಚಿತವಾಗಿ ಜಾಗೃತಿ ವಹಿಸಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವಂತೆ ಕರೆ ನೀಡಿದರು.

ಮೈ ಭಾರತ್ (ದಕ್ಷಿಣ ಕನ್ನಡ) ಉಪನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ. ಮಾತನಾಡಿ, ಮಾದಕ ದ್ರವ್ಯದ ಪಿಡುಗನ್ನು ನಿರ್ಮೂಲನೆ ಮಾಡುವಲ್ಲಿ ಯುವಜನತೆ ಸಕ್ರಿಯ ನಾಯಕತ್ವ ವಹಿಸಬೇಕು. ಸಶಕ್ತ ಭಾರತ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದರು.

ಸೇಂಟ್ ಆಗ್ನೆಸ್ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಉದಯಕುಮಾರ್ ಅವರು 100 ವಾರಗಳ ಅಭಿಯಾನದ ರೂಪುರೇಖೆಯನ್ನು ವಿವರಿಸಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಂದಲೇ ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಗಣ್ಯರು ‘ನಶಾ ಮುಕ್ತಿ ಸಂಕಲ್ಪ’ ಪ್ರತಿಜ್ಞೆ ಸ್ವೀಕರಿಸಿದರು. ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಬದ್ಧತೆಯನ್ನು ವ್ಯಕ್ತಪಡಿಸುವ ಸಲುವಾಗಿ ಸಹಿ ಸಂಗ್ರಹ ಅಭಿಯಾನವೂ ನಡೆಯಿತು. ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮಗಳನ್ನು ಬಿಂಬಿಸುವ ಬೀದಿ ನಾಟಕ ಹಾಗೂ ಸಾಂಸ್ಕೃತಿಕ ರೂಪಕಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಮೈ ಭಾರತ್‌ನ ಜಗದೀಶ್ ಕೆ., ಮಹಿಳಾ ಕೋಶದ ಸಂಚಾಲಕಿ ಲವಿತಾ ರಮ್ಯಾ ಡಿಸೋಜ, ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೀತಾ ಟೌರೊ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ನೂರಾರು ವಿದ್ಯಾರ್ಥಿ ಸ್ವಯಂಸೇವಕರು ಉಪಸ್ಥಿತರಿದ್ದರು.

ಮುಂದಿನ 100 ವಾರಗಳ ಕಾಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನವನ್ನು ನಿರಂತರವಾಗಿ ಮುಂದುವರಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!