ದಕ್ಷಿಣ ಕನ್ನಡ–ಉಡುಪಿ ಗ್ರಾಮ ಪಂಚಾಯತ್‌ಗಳ ವಿಶೇಷ ಅಗತ್ಯಗಳಿಗೆ ಆಡಳಿತಾತ್ಮಕ, ತಾಂತ್ರಿಕ ಹಾಗೂ ಹಣಕಾಸು ವ್ಯವಸ್ಥೆ ಸುದಾರಣೆಗೆ ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳ ವಿಶೇಷ ಭೌಗೋಳಿಕ ಹಾಗೂ ಆಡಳಿತಾತ್ಮಕ ಪರಿಸ್ಥಿತಿಯನ್ನು ಪರಿಗಣಿಸಿ, ಪಂಚಾಯತ್‌ಗಳ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಸರಳೀಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಂಚಾಯತ್‌ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಭಾರತ್ ಜೋಡೊ ದ.ಕ. ಸಂಯೋಜಕ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ನಿಯೋಗದ ತಂಡ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಮಾನ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಗ್ರಾಮ ಪಂಚಾಯತ್‌ಗಳು ಕರಾವಳಿ, ಗುಡ್ಡಗಾಡು ಹಾಗೂ ಮಲೆನಾಡಿನ ವಿಭಿನ್ನ ಭೌಗೋಳಿಕ ಪರಿಸ್ಥಿತಿಯನ್ನು ಹೊಂದಿದ್ದು, ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ, ಆದಾಯ ಮೂಲಗಳು, ಮಳೆ ಪ್ರಮಾಣ ಹಾಗೂ ಆಡಳಿತಾತ್ಮಕ ಅಗತ್ಯಗಳು ವಿಭಿನ್ನವಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಸರ್ಕಾರಿ ಸೇವೆಗಳು ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪುವಂತೆ ವಿಶೇಷ ಆಡಳಿತಾತ್ಮಕ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿಯ ಪ್ರಮುಖ ಬೇಡಿಕೆಗಳು:


ಗ್ರಾಮ್ ಜಿ– ಯೋಜನೆಯ ಅನುಷ್ಠಾನದಲ್ಲಿರುವ ಆಡಳಿತಾತ್ಮಕ ಹಾಗೂ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸಿ ಸರಳ ಮಾರ್ಗಸೂಚಿ ರೂಪಿಸುವುದು.

ಕರಾವಳಿ–ಮಲೆನಾಡು ಪ್ರದೇಶಗಳ ವಿಶೇಷತೆ ಪರಿಗಣಿಸಿ ಪ್ರತ್ಯೇಕ ಗ್ರಾಮಾಂತರ ಯೋಜನಾ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳುವುದು.

ಗ್ರಾಮ ಪಂಚಾಯತ್‌ಗಳ ವಿವಿಧ ಸಮಿತಿಗಳ ರಚನೆ ಮತ್ತು ಕಾರ್ಯವಿಧಾನವನ್ನು ಸರಳೀಕರಿಸುವುದು.

ವಾರ್ಡ್‌ಗೆ ಒಬ್ಬ ಸದಸ್ಯರ ವ್ಯವಸ್ಥೆ ಹಾಗೂ ಪಕ್ಷಾಧಾರಿತ ಚುನಾವಣೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು.

ಕರಾವಳಿಗೆ ವಿಶೇಷವಾಗಿ 9 & 11 ಇತ್ಯಾದಿ ಸಮಸ್ಯೆಗಳ ಸುದಾರಣೆಗೆ ನಗಾರಬಿವೃದ್ದಿ ಪ್ರಾದಿಕಾರದ ಬದಲು ಗ್ರಾಮಾಂತರ ಪ್ರಾಧಿಕಾರ ರಚನೆ ಮಾಡುವುದು.ಕಟ್ಟಡ ಸಂಖ್ಯೆ ಮತ್ತು ಪಂಚತಂತ್ರ 2.0 ತಂತ್ರಾಂಶವನ್ನು ಪರಸ್ಪರ ಸಂಯೋಜಿಸುವ ವ್ಯವಸ್ಥೆ ರೂಪಿಸುವುದು.

ಭಾರೀ ಮಳೆ, ನೆರೆ ಹಾಗೂ ಮೂಲಸೌಕರ್ಯ ಹಾನಿಗೆ ಗ್ರಾಮ ಪಂಚಾಯತ್‌ಗಳಿಗೆ ವಿಶೇಷ ಮಳೆಹಾನಿ ಅನುದಾನ ಒದಗಿಸುವುದು.

ಸಣ್ಣ ಹಾಗೂ ತುರ್ತು ಕಾಮಗಾರಿಗಳಿಗೆ ಪಂಚಾಯತ್‌ ಮಟ್ಟದಲ್ಲೇ ತಾಂತ್ರಿಕ ಅನುಮೋದನೆ ನೀಡುವ ಮಿತಿಯನ್ನು ಹೆಚ್ಚಿಸುವುದು.

ಪ್ರತಿ ಗ್ರಾಮ ಪಂಚಾಯತ್‌ಗೆ ಅಗತ್ಯ ಘನತ್ಯಾಜ್ಯ ನಿರ್ವಹಣಾ ಘಟಕ, ಅನುದಾನ ಹಾಗೂ ತಾಂತ್ರಿಕ ನೆರವು ಒದಗಿಸುವುದು.

16ನೇ ಹಣಕಾಸು ಆಯೋಗದ ಅನುದಾನ ಬಳಕೆಗೆ ಸರಳ ಹಾಗೂ ಸ್ಪಷ್ಟ ಮಾರ್ಗಸೂಚಿ ರೂಪಿಸುವುದು.

ಶೇ.25 ವೈಯಕ್ತಿಕ ಫಲಾನುಭವಿಗಳ ಸಹಾಯಧನವನ್ನು ಮಿತಿ ಹೆಚ್ಚಿಸುವುದು. ಸರಳ ಹಾಗೂ ತ್ವರಿತ ವಿಧಾನದಲ್ಲಿ ಅರ್ಹರಿಗೆ ತಲುಪಿಸುವುದು.
ಇ–ಸ್ವತ್ತು ವ್ಯವಸ್ಥೆಯಲ್ಲಿನ ತಾಂತ್ರಿಕ ಹಾಗೂ ದಾಖಲೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ ವ್ಯವಸ್ಥೆಯನ್ನು ಸರಳೀಕರಿಸುವುದು.

ಗ್ರಾಮ ಪಂಚಾಯತ್‌ಗಳ ಕಾರ್ಯಭಾರಕ್ಕೆ ಅನುಗುಣವಾಗಿ ಅಗತ್ಯ ಸಿಬ್ಬಂದಿ ಮಂಜೂರು ಮಾಡಿ, ಅವರಿಗೆ ಸಮರ್ಪಕ ವೇತನ ಹಾಗೂ ಸೇವಾ ಸೌಲಭ್ಯ ಕಲ್ಪಿಸುವುದು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿಶೇಷ ಪರಿಸ್ಥಿತಿಯನ್ನು ಪರಿಗಣಿಸಿ ಮೇಲ್ಕಂಡ ಬೇಡಿಕೆಗಳನ್ನು ಆದ್ಯತೆಯಿಂದ ಪರಿಶೀಲಿಸಿ, ಗ್ರಾಮ ಪಂಚಾಯತ್‌ಗಳ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಗ್ರಾಮೀಣ ಜನರಿಗೆ ಸರ್ಕಾರಿ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸುಭಾಶ್ಚಂದ್ರ ಶೆಟ್ಟಿ ಅವರು ಮನವಿ ಮಾಡಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!