​ಸೂರು ಸಿಗದ ಬದುಕು: 30 ವರ್ಷಗಳಿಂದ ಗುಡಿಸಲಲ್ಲೇ ವಾಸವಿದ್ದರೂ ಪಟ್ಟಾ ನೀಡದ ಅಧಿಕಾರಿಗಳು : ಮಂಜೇಶ್ವರದ ವಿಶೇಷ ಚೇತನ ಪ್ರವೀಣ್ ಕುಟುಂಬದ ಕಣ್ಣೀರಿನ ಕಥೆ

​ಮಂಜೇಶ್ವರ: ಸ್ವಂತಕ್ಕೊಂದು ನಿವೇಶನದ ಪಟ್ಟೆ ಗಾಗಿ ದಶಕಗಳಿಂದ ಅಲೆದಾಡಿದರೂ, ಸಂಬಂಧಪಟ್ಟ ಅಧಿಕಾರಿಗಳ ದಾಸ್ಯ ಹಾಗೂ ನಿರ್ಲಕ್ಷ್ಯದಿಂದಾಗಿ ಅಂಗವಿಕಲ ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ಗುಡಿಸಲಿನಲ್ಲೇ ಕಾಲ ಕಳೆಯಬೇಕಾದ ಶೋಚನೀಯ ಸ್ಥಿತಿ ಮಂಜೇಶ್ವರದಲ್ಲಿ ಬೆಳಕಿಗೆ ಬಂದಿದೆ.

​ಮಂಜೇಶ್ವರ ಪಂಚಾಯತ್ 7 ನೇ ವಾರ್ಡ್‌ಗೆ ಸೇರಿದ ಉದ್ಯಾವರ ಗುಡ್ಡೆ ಎಂಬಲ್ಲಿನ ಪುರಂಬೋಕು ಜಾಗದಲ್ಲಿ ಕಳೆದ 30 ವರ್ಷಗಳಿಂದ ಪ್ರವೀಣ್ (72) ಎಂಬವರು ತಮ್ಮ ಇಡೀ ಕುಟುಂಬದೊಂದಿಗೆ ಸಣ್ಣದೊಂದು ಗುಡಿಸಲು ಕಟ್ಟಿ ವಾಸಿಸುತ್ತಿದ್ದಾರೆ.

ಅಂಗವಿಕಲರಾಗಿರುವ ಪ್ರವೀಣ್ ಅವರಿಗೆ ಸ್ವಂತ ಹಕ್ಕಿನ ಪಟ್ಟೆ ಲಭಿಸದೇ ಇದ್ದರೂ, ಅಧಿಕಾರಿಗಳ ಬಾಗಿಲಿಗೆ ಅಲೆದು ಅಲೆದು ಸಾಸ ಸವೆಸಿದ್ದಾರೆ. ಆದರೆ ಇವರ ಕಷ್ಟ-ಕಾರ್ಪಣ್ಯಗಳು ಹಾಗೂ ಸಂಕಟವನ್ನು ಕಣ್ಣಾರೆ ಕಂಡರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸರ್ವೆ ಸಂಖ್ಯೆ 75/2ರಲ್ಲಿ ಸುಮಾರು 6 ಸೆಂಟ್ಸ್ ಜಾಗದಲ್ಲಿ ವಾಸಿಸುತ್ತಿರುವ 40 ಪ್ರತಿಶತ ಅಂಗವಿಕಲರಾದ ಪ್ರವೀಣ್, ಪತ್ನಿ, ಮಕ್ಕಳು ಮೊಮ್ಮಕ್ಕಳು ಹಾಗೂ ಸಹೋದರಿಯರೊಂದಿಗೆ ಒಂದೇ ಸೂರಿನಡಿ ಕಾಲ ದೂಡುತ್ತಿದ್ದಾರೆ. ಈ ಬಡ ಕುಟುಂಬಕ್ಕೆ ಇದುವರೆಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಲಭಿಸಿಲ್ಲ. ಕೂಲಿ ಕೆಲಸ ಮಾಡಿ ಬಂದ ಅಲ್ಪ ಆದಾಯದಲ್ಲೇ ಇಡೀ ಕುಟುಂಬದ ಹೊಟ್ಟೆ ತುಂಬಿಸಬೇಕಾದ ಅನಿವಾರ್ಯತೆ ಪ್ರವೀಣ್ ಅವರಿಗಿದೆ.
ರಾತ್ರಿಯಾದರೆ ಭಯ ಕಾಡುತ್ತಿರುವ ಕತ್ತಲಾಗಿರುವ ಈ ಗುಡಿಸಲಿನೊಳಗೆ ವಿಷ ಜಂತುಗಳು ಆಗಾಗ ಬರುತ್ತಿರುತ್ತವೆ. ಅದೇ ರೀತಿ ಮಳೆ ಬಂದರೆ ವಾಸಸ್ಥಳ ಕೊಳವಾಗಿ ಮಾರ್ಪಾಟಾಗುತ್ತದೆ. ಈ ಗುಡಿಸಲಿನ ಸಮೀಪವೇ ಅರಣ್ಯ ಇಲಾಖೆಯ ಅಧೀನದಲ್ಲಿರುವ ಸ್ಥಳಗಳಲ್ಲಿ ಬೃಹತಾದ ಮರಗಳು ಬೆಳೆದು ನಿಂತಿದ್ದು ಜೋರಾಗಿ ಗಾಳಿ ಬೀಸುವಾಗ ಯಾವಾಗ ಮುರಿದು ಮನೆ ಮೇಲೆ ಬೀಳುತ್ತದಾ ಎಂಬ ಭಯದಿಂದ ನಿದ್ರಿಸಲು ಕೂಡಾ ಸಾಧ್ಯವಾಗದ ಇವರ ಪರಿಸ್ಥಿತಿಯನ್ನು ನೋಡಿದರೆ ಎಂತಹ ಕಲ್ಲು ಹೃದಯ ಕೂಡಾ ನೀರಾಗಿ ಹೋಗಬಹುದು.

​ಕಳೆದ 43 ವರ್ಷಗಳಿಂದ ಇವರು ವಾಸಿಸುತ್ತಿರುವ ಈ ಜಾಗಕ್ಕೆ ಕನಿಷ್ಠ ಭೂಮಿಯ ಪಟ್ಟಾನಾದರೂ ನೀಡಬೇಕು ಎಂದು ಪಂಚಾಯೇತ್ ಕಾರ್ಯದರ್ಶಿಯಿಂದ ಹಿಡಿದು ಮುಖ್ಯಮಂತ್ರಿಯವರವರೆಗೆ ನಿರಂತರವಾಗಿ ಮನವಿ ಸಲ್ಲಿಸುತ್ತಲೇ ಬಂದಿರುವುದಾಗಿ ಪ್ರವೀಣ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವುದೇ ಇವರ ನಿತ್ಯದ ಕೆಲಸವಾಗಿದೆಯೇ ಹೊರತು, ಯಾವುದೇ ಹಂತದಲ್ಲೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ.

​ಕಣ್ಣೆದುರೇ ಕಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಕಣ್ಣೆತ್ತಿ ನೋಡದಿರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ. ಇನ್ಮುಂದೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯತೆಯ ಆಧಾರದ ಮೇಲೆ ತಕ್ಷಣವೇ ಸ್ಪಂದಿಸಿ, ತಾವಿರುವ ಜಾಗಕ್ಕೆ ಪಟ್ಟಾವನ್ನು ಮಂಜೂರು ಮಾಡಿ ಸೂಕ್ತ ಸೂರು ಕಲ್ಪಿಸಿಕೊಡಬೇಕೆಂದು ಪ್ರವೀಣ್ ಹಾಗೂ ಅವರ ಕುಟುಂಬಸ್ಥರು ಒತ್ತಾಯಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!