ಮಂಗಳೂರು:ಸೆ30 ಮಂಗಳೂರಿನ MRPL ಆವರಣದಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ಕಟ್ಟಡಗಳು ಹಾಗೂ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳ ಹಲವು ಮನೆಗಳಿಗೆ ಹಾನಿಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಸಾವಿರಾರು ಕಾರ್ಮಿಕರು ದುಡಿಯುವ ಪ್ರಮುಖ ಕೈಗಾರಿಕಾ ಪ್ರದೇಶದಲ್ಲಿ ಇಂತಹ ಘಟನೆ ಸಂಭವಿಸಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ.

ಸ್ಫೋಟದ ಪರಿಣಾಮವಾಗಿ ಸ್ಥಳೀಯರ ಮನೆಗಳು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವುದರಿಂದ, ಹಾನಿಗೊಳಗಾದ ಪ್ರದೇಶಗಳ ಸಮಗ್ರ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಘಟನೆಯಲ್ಲಿ ಕಾರ್ಮಿಕರು ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಅಥವಾ ಗಾಯಗಳಾಗಿದ್ದರೆ, ಅವರಿಗೆ ಅಗತ್ಯ ವೈದ್ಯಕೀಯ ನೆರವು ಹಾಗೂ ಪರಿಹಾರವನ್ನು ತಕ್ಷಣ ಒದಗಿಸಬೇಕು.

MRPLನಲ್ಲಿ ಸಾವಿರಾರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಸುರಕ್ಷತೆಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಸ್ಫೋಟಕ್ಕೆ ನಿಖರ ಕಾರಣವೇನು, ಸುರಕ್ಷತಾ ಕ್ರಮಗಳಲ್ಲಿ ಯಾವುದೇ ಲೋಪವಾಗಿದೆಯೇ ಹಾಗೂ ಕೈಗಾರಿಕಾ ಸುರಕ್ಷತಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.

ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ MRPLನ ಸುರಕ್ಷತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಮಿಕರ ಜೀವ ಹಾಗೂ ಸುತ್ತಮುತ್ತಲಿನ ಜನರ ಸುರಕ್ಷತೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.
ಕಾರ್ಮಿಕರು ಹಾಗೂ ಸ್ಥಳೀಯ ಜನರ ಜೀವ ಮತ್ತು ಆಸ್ತಿಗೆ ಯಾವುದೇ ರೀತಿಯ ಅಪಾಯ ಉಂಟಾಗದಂತೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು SDTU ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್ ಆಗ್ರಹಿಸಿದ್ದಾರೆ.

