ದಕ್ಷಿಣ ಕನ್ನಡದಲ್ಲಿ ನ.1ರಿಂದ ಪರಿಷ್ಕೃತ ಆಟೋ ಪ್ರಯಾಣ ದರ ಜಾರಿ

ಮಂಗಳೂರು : ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಪ್ರಯಾಣ ದರವನ್ನು ಮರು ಪರಿಷ್ಕರಿಸಿದ್ದು, ಪರಿಷ್ಕೃತ ದರಗಳು ನವೆಂಬರ್ 1ರಿಂದ ಜಾರಿಗೆ ಬರಲಿವೆ.

ಈ ಹಿಂದೆ 2022ರ ನವೆಂಬರ್ 23ರಂದು ಹೊರಡಿಸಿದ್ದ ಪರಿಷ್ಕೃತ ಅಧಿಸೂಚನೆಯಲ್ಲಿ ನಂತರದ ಪ್ರತಿ ಕಿಲೋಮೀಟರ್‌ಗೆ ನಿಗದಿಪಡಿಸಿದ್ದ 20 ರೂ. ದರವನ್ನು ಪರಿಗಣಿಸದೆ ಆಗಸ್ಟ್ 28ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಆ ಆದೇಶವನ್ನು ಹಿಂಪಡೆದು, ಪರಿಷ್ಕೃತ ದರದೊಂದಿಗೆ ಹೊಸ ಆದೇಶ ಹೊರಡಿಸಲಾಗಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ, ಎಲ್‌ಪಿಜಿ ಹಾಗೂ ಡೀಸೆಲ್ ಬೆಲೆಗಳಲ್ಲಿನ ಏರಿಕೆ ಮತ್ತು ವಾಹನಗಳ ಬಿಡಿಭಾಗಗಳ ಬೆಲೆ ಹೆಚ್ಚಳದಿಂದ ಆಟೋರಿಕ್ಷಾ ಚಾಲಕರ ಖರ್ಚು-ವೆಚ್ಚವೂ ಹೆಚ್ಚಾಗಿದೆ. ಚಾಲಕರ ಕ್ಷೇಮಾಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ದರವನ್ನು ಪರಿಷ್ಕರಿಸಲಾಗಿದೆ.

ಪರಿಷ್ಕೃತ ದರದಂತೆ ಮೊದಲ 1.5 ಕಿ.ಮೀ.ಗೆ ಕನಿಷ್ಠ 40 ರೂ. ಹಾಗೂ ನಂತರದ ಪ್ರತಿ ಕಿ.ಮೀ.ಗೆ 23 ರೂ. ನಿಗದಿಪಡಿಸಲಾಗಿದೆ. ಎರಡೂ ದರಗಳಲ್ಲಿಯೂ ಗರಿಷ್ಠ ಮೂರು ಮಂದಿ ಪ್ರಯಾಣಿಕರಿಗೆ ಅವಕಾಶವಿದೆ.

ಕಾಯುವ ದರದಲ್ಲಿ ಮೊದಲ 10 ನಿಮಿಷ ಉಚಿತವಾಗಿದ್ದು, ನಂತರ ಪ್ರತಿ 15 ನಿಮಿಷಗಳಿಗೆ ಅಥವಾ ಅದರ ಭಾಗಕ್ಕೆ 5 ರೂ. ಪಡೆಯಲು ಅವಕಾಶವಿದೆ. ಪ್ರಯಾಣಿಕರ ಲಗೇಜ್‌ಗೆ ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆಗಿರಬೇಕು. ಮೊದಲ 20 ಕೆ.ಜಿ. ಲಗೇಜ್ ಉಚಿತವಾಗಿದ್ದು, ನಂತರದ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ 5 ರೂ. ಶುಲ್ಕ ವಿಧಿಸಬಹುದಾಗಿದೆ.

ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಸಾಮಾನ್ಯ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶ ನೀಡಲಾಗಿದೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ದರಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿಯೂ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು ಮೀಟರ್‌ಗಳನ್ನು ಪರಿಷ್ಕೃತ ದರಕ್ಕೆ ಅನುಗುಣವಾಗಿ ರಿಕ್ಯಾಲಿಬರೇಷನ್ ಮಾಡಿಸಿ, ಸೀಲ್ ಮಾಡಿಸಿಕೊಂಡ ಬಳಿಕವೇ ಪ್ರಯಾಣಿಕರಿಂದ ಪರಿಷ್ಕೃತ ಮೀಟರ್ ದರವನ್ನು ಪಡೆಯಬೇಕು ಎಂದು ಪ್ರಾಧಿಕಾರ ಸೂಚಿಸಿದೆ.

ನಿಗದಿತ ನಿಯಮಗಳನ್ನು ಉಲ್ಲಂಘಿಸುವ ಚಾಲಕರು ಅಥವಾ ಮಾಲೀಕರ ವಿರುದ್ಧ ಕಾನೂನುಬದ್ಧ ದಂಡ, ಪರವಾನಿಗೆ ಅಮಾನತು ಅಥವಾ ರದ್ದುಪಡಿಸುವುದು ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೂಚಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!