ಮಂಗಳೂರು: ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ವತಿಯಿಂದ 7ನೇ ಅಂತರರಾಷ್ಟ್ರೀಯ ಡೇಟಾ ಸೈನ್ಸ್, ಕಂಪ್ಯೂಟೇಶನ್ ಮತ್ತು ಸೆಕ್ಯುರಿಟಿ ಸಮ್ಮೇಳನ (IDSCS-2026) ಅ.9ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್‌ನ ಡೀನ್ ಡಾ. ಎಸ್. ರುಬನ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9.30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಜಪಾನ್‌ನ ಸೋಫಿಯಾ ವಿಶ್ವವಿದ್ಯಾಲಯದ ಪ್ರೊ. ಟಾಡ್ ಗೊನ್ಸಾಲ್ವೆಸ್ ಮುಖ್ಯ ಅತಿಥಿಯಾಗಿ, ಅಮೆಜಾನ್‌ನ ಹಿರಿಯ ವ್ಯವಸ್ಥಾಪಕ ಡಾ. ಕಪಿಲ್ ತಿವಾರಿ ಹಾಗೂ ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಡೀನ್ ಡಾ. ಸಮೀಕ್ಷಾ ಶುಕ್ಲಾ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅಧ್ಯಕ್ಷತೆ ವಹಿಸಲಿದ್ದಾರೆ.

ಸಮ್ಮೇಳನಕ್ಕೆ 957 ಸಂಶೋಧನಾ ಲೇಖನಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 72 ಪ್ರಬಂಧಗಳನ್ನು ಮಂಡನೆಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಪ್ರಬಂಧಗಳನ್ನು ಸ್ಕೋಪಸ್ ಸೂಚ್ಯಂಕಿತ ಸ್ಪ್ರಿಂಗರ್ ಪ್ರಕಟಣೆಗೆ ಸಲ್ಲಿಸಲಾಗುವುದು. ಡೇಟಾ ಸೈನ್ಸ್, ಗಣಕಯಂತ್ರ ತಂತ್ರಜ್ಞಾನ ಹಾಗೂ ಡಿಜಿಟಲ್ ಭದ್ರತಾ ಕ್ಷೇತ್ರಗಳಲ್ಲಿ ಸಂಶೋಧನೆ, ನವೋದ್ಯಮ ಮತ್ತು ಅಂತರರಾಷ್ಟ್ರೀಯ ಸಹಯೋಗಕ್ಕೆ ಉತ್ತೇಜನ ನೀಡುವುದು ಸಮ್ಮೇಳನದ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸಲರ್ ರೆ. ಡಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ., ಡಾ. ಗೀತಾ ಪಿಂಟೋ, ಪ್ರಮುಖರಾದ ಡಾ. ಗ್ಲೆನ್ಸನ್ ಟೋನಿ, ಚಂದ್ರಕಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

