ಮಂಗಳೂರು: ಯೆನೆಪೋಯ ಸ್ಕೂಲ್ ವತಿಯಿಂದ ‘ದಿ ಲಯನ್ ಕಿಂಗ್ – ಎ ಲೆಗಸಿ ರಿಟೋಲ್ಡ್’ ಎಂಬ ಭವ್ಯ ಸಂಗೀತ ನಾಟಕವನ್ನು ಡಿಸೆಂಬರ್ 5ರಂದು ಸಂಜೆ 6.30ಕ್ಕೆ ನಗರದ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಯೆನೆಪೋಯ ಸ್ಕೂಲ್ ಇದರ
ಅಸೋಸಿಯೇಟ್ ಡೈರೆಕ್ಟರ್ ಆಂಥೋನಿ ಜೋಸೆಫ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸೃಜನಶೀಲತೆ ಮತ್ತು ತಂಡದ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಮಂಗಳೂರು ಯಕ್ಷಗಾನ ಮತ್ತು ತುಳು ರಂಗಭೂಮಿಯ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಇಂಗ್ಲಿಷ್ ರಂಗಭೂಮಿ ಹಾಗೂ ವಿದ್ಯಾರ್ಥಿಗಳ ಸಂಗೀತ ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಪ್ರಯತ್ನ ಕೈಗೊಳ್ಳಲಾಗಿದೆ. ನಾಟಕವು ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ಸಂವಹನ ಕೌಶಲ, ವೇದಿಕೆ ಭಯ ನಿವಾರಣೆ ಹಾಗೂ ಜೀವನ ಕೌಶಲಗಳನ್ನು ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

‘ದಿ ಲಯನ್ ಕಿಂಗ್’ ಕಥೆಯಿಂದ ಪ್ರೇರಣೆ ಪಡೆದಿರುವ ಈ ನಾಟಕವು ಧೈರ್ಯ, ಜವಾಬ್ದಾರಿ, ಕುಟುಂಬದ ಮೌಲ್ಯಗಳು ಮತ್ತು ಸ್ವಯಂ ಅನ್ವೇಷಣೆಯ ಸಂದೇಶವನ್ನು ಸಾರಲಿದೆ. ವಿದ್ಯಾರ್ಥಿಗಳ ಅಭಿನಯ, ನೃತ್ಯ, ಸಂಗೀತ, ವಸ್ತ್ರ ವಿನ್ಯಾಸ ಹಾಗೂ ಆಕರ್ಷಕ ವೇದಿಕೆ ಮತ್ತು ದೃಶ್ಯ ಪರಿಣಾಮಗಳು ಪ್ರದರ್ಶನದ ವಿಶೇಷತೆಯಾಗಿವೆ.

ಪೋಷಕರು, ಸಾರ್ವಜನಿಕರು ಹಾಗೂ ರಂಗಭೂಮಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.

