ಮಂಗಳೂರು: ಬಜಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ) ಮುಂಬರುವ ಚಳಿಗಾಲದಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ವಿಮಾನ ಯಾನದ ಸಿದ್ಧತೆ ನಡೆಸಿದೆ.ಇದೇ ವೇಳೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಕುವೈತ್ಗೆ ವಿಮಾನಗಳನ್ನು ಪುನರಾರಂಭಿಸಲಿದ್ದು, ಮಂಗಳೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಸ್ ಅಲ್ ಖೈಮಾದ ಹೊಸ ರೂಟ್ನ ವಿಮಾನ ಯಾನ ಆರಂಭಗೊಳ್ಳಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

ಹೊಸ ರೂಟ್ ಅಲ್ ಕೈಮಾಕ್ಕೆ ಅ.31ರಿಂದ ವಿಮಾನ ಯಾನ ಆರಂಭಗೊಳ್ಳಲಿದ್ದು, ಈ ಮೂಲಕ ಮಂಗಳೂರಿ ನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಅಂತರಾಷ್ಟ್ರೀಯ ವಾರದ ಸಂಚಾರ 34 ರಿಂದ 45ಕ್ಕೆ ಏರಿಕೆಯಾಗಲಿವೆ.
ಇದೇ ವೇಳೆ, ದೇಶೀಯವಾಗಿ ಮಂಗಳೂರಿನಿಂದ ಅಗತ್ತಿ ಮತ್ತು ಪುಣೆಗೆ ಪ್ರತಿನಿತ್ಯ ಎರಡು ಹೊಸ ವಿಮಾನ ಸಂಚಾರ ಆರಂಭಿಸಲಿದ್ದು, ವಾರದಲ್ಲಿ 14 ವಿಮಾನ ಯಾನ ಸೇರ್ಪಡೆಯಾಗಲಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಕೂಡ ಬೋಯಿಂಗ್ 737-8 ವಿಮಾನದ ಮೂಲಕ ಹೈದರಾಬಾದ್ಗೆ ವಾರಕ್ಕೆ ಮೂರು ಬಾರಿ ಸಂಚರಿಸಲಿದೆ.

ಇಂಡಿಗೊ ಸಂಸ್ಥೆಯು ಮುಂಬೈನಂತಹ ಪ್ರಮುಖ ಮೆಟ್ರೋ ಮಾರ್ಗಗಳಲ್ಲಿ ಹೆಚ್ಚುವರಿ ಸೇವೆಗಳನ್ನು ನೀಡುತ್ತಿದ್ದರೆ, ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು ಮತ್ತು ಹೈದರಾಬಾದ್ಗೆ ಸಂಪರ್ಕವನ್ನು ಹೆಚ್ಚಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

