ಬದಿಯಡ್ಕ ತುಳು ಭವನದಲ್ಲಿ ಸಂಭ್ರಮದ ‘ತುಳು ಲಿಪಿ ದಿನಾಚರಣೆ’: ಪುಣಿಚಿತ್ತಾಯ ಹಾಗೂ ಕಾರಂತರ ಸಂಸ್ಮರಣೆ

ಬದಿಯಡ್ಕ: ಸ್ಥಳೀಯ ತುಳು ಭವನದಲ್ಲಿ ತುಳು ಲಿಪಿ ದಿನಾಚರಣೆ ಹಾಗೂ ತುಳುನಾಡಿನ ಮೇರು ಸಂಶೋಧಕ ದಿ. ಪುಂಡೂರು ವೆಂಕಟರಾಜ ಪುಣಿಚಿತ್ತಾಯ ಮತ್ತು ಕಡಲತೀರದ ಭಾರ್ಗವ ಡಾ. ಕೋಟ ಶಿವರಾಮ ಕಾರಂತರ ಸಂಸ್ಮರಣಾ ಕಾರ್ಯಕ್ರಮ ಬದಿಯಡ್ಕದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಮತ್ತು ತುಳು ಭವನ ಸಮಿತಿಗಳ ಆಶ್ರಯದಲ್ಲಿ ಶನಿವಾರ ಅರ್ಥಪೂರ್ಣವಾಗಿ ಜರುಗಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಸಾಮಾಜಿಕ ಹಾಗೂ ರಾಜಕೀಯ ನೇತಾರ ಮಂಜುನಾಥ ಆಳ್ವ ಮಡ್ವ ಅವರು ಮಾತನಾಡಿ, “ತುಳು ಭಾಷೆಗೆ ಶ್ರೀಮಂತವಾದ ಇತಿಹಾಸ ಹಾಗೂ ಸ್ವಂತ ಲಿಪಿಯಿದೆ. ಪುಣಿಚಿತ್ತಾಯರಂತಹ ಮಹನೀಯರ ಅವಿರತ ಪರಿಶ್ರಮದಿಂದ ಇಂದು ತುಳು ಲಿಪಿಯು ಪುನರುಜ್ಜೀವನಗೊಂಡಿದೆ. ನಮ್ಮ ಭಾಷೆಯ ಅನನ್ಯತೆ ಮತ್ತು ಅಸ್ಮಿತೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಲಿಪಿಯ ಕಲಿಕೆ ಮತ್ತು ಬಳಕೆ ಅನಿವಾರ್ಯ. ನಾಡಿನ ಸಂಸ್ಕøತಿ ಉಳಿಯಬೇಕಾದರೆ ಮಾತೃಭಾಷೆಯ ಬೇರುಗಳು ಗಟ್ಟಿಯಾಗಬೇಕು,” ಎಂದು ಕರೆ ನೀಡಿದರು.
ತುಳು ಭಾಷೆ, ಸಾಂಸ್ಕøತಿಕ ಚಟುವಟಿಕೆಗಳ ಆಡುಂಬೋಲವಾದ ಬದಿಯಡ್ಕದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಮತ್ತು ತುಳು ಭವನ ಸಮಿತಿಗಳು ಮುನ್ನಡೆಸುತ್ತಿರುವ ಚಟುವಟಿಕೆಗಳು ಸಮಾಜಮುಖಿಯಾಗಿ ಶ್ಲಾಘನೀಯವಾದುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ವಂ ಬೋರ್ಡ್ ಸದಸ್ಯ ಎ. ಕೆ. ಶಂಕರ ಆದೂರು ಅವರು ಮಾತನಾಡಿ, “ಭಾಷೆ ಮತ್ತು ಸಂಸ್ಕೃತಿ ಒಂದು ಸಮಾಜದ ಜೀವನಾಡಿ. ಶಿವರಾಮ ಕಾರಂತರು ಹಾಗೂ ಪುಣಿಚಿತ್ತಾಯರ ಚಿಂತನೆಗಳು, ಸಾಹಿತ್ಯಿಕ ಕೊಡುಗೆಗಳು ಸದಾ ನಮಗೆ ದಾರಿದೀಪ. ತುಳು ಭಾಷೆಯ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಇಂತಹ ಕಾರ್ಯಕ್ರಮಗಳು ನಾಡಿನಾದ್ಯಂತ ನಿರಂತರವಾಗಿ ನಡೆಯಬೇಕು,” ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಮಾಜಿಕ ಕಾರ್ಯಕರ್ತ, ಕುಂಬ್ಡಾಜೆ ಗ್ರಾ.ಪಂ.ನಮಾಜಿ ಉಪಾಧ್ಯಕ್ಷ ಆನಂದ ಮವ್ವಾರು ಮಾತನಾಡಿ, ಸತತ ಸರ್ಕಾರಗಳು ಕೇರಳ ತುಳು ಅಕಾಡೆಮಿಯನ್ನು ಅಲಕ್ಷ್ಯಿಸಿದೆ. ಈಗಿನ ನೂತನ ಸರ್ಕಾರ ಸಂಪುಟ ದರ್ಜೆಯ ಸ್ಥಾನ ಮಾನದೊಂದಿಗೆ ಕೇರಳ ತುಳು ಭವನಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಶೀಘ್ರ ಪುನಃರಚಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸಮಾಜಮುಖಿ ಸಾಧಕರಾದ ವೆಂಕಟ್ ಭಟ್ ಎಡನೀರು ಹಾಗೂ ಶ್ರೀಹರಿ ಭಟ್ ಪೆಲ್ತಾಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿ ಜಿ ಕಾಸರಗೋಡು ಶಿವರಾಮ ಕಾರಂತರ ಬಗ್ಗೆ ಮಾತನಾಡಿದರು ವೇದಿಕೆಯಲ್ಲಿ ಪ್ರಮುಖರಾದ ವಿಜಯರಾಜ ಪುಣಿಚಿತ್ತಾಯ ಹಾಗೂ ಪ್ರಭಾವತಿ, ಕೆದಿಲಾಯ ಹರೀಶ್ ಗೋಸಡ ಬೀಸಿ ಗೋಪಾಲ ಕೃಷ್ಣ ಭಟ್ , ಜಾನಪದ ಕಲಾವಿದ ಮನು ಪಣಿಕ್ಕರ್, ರಾಮ ಪಟ್ಟಾಜೆ ,ನಿರಂಜನ್ ರೈ, ಶಿಕ್ಷಕಿ ಜಲಜಾಕ್ಷಿ ಟೀಚರ್, ಜಯಲತ ಟೀಚರ್ ಅನಿತಾ ಟೀಚರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ರತ್ನಾಕರ ಓಡಂಗಲ್ಲು ಪ್ರಾರ್ಥಿಸಿದರು. ತಾರಾನಾಥ ರೈ ಕಡಾರು ಸ್ವಾಗತಿಸಿದರು. ಅಖಿಲೇಶ್ ನಗುಮುಗಂ ಪ್ರಾಸ್ತಾವಿಕ ನುಡಿಗಳನ್ನಾಡಿ ತುಳು ಲಿಪಿಯ ಮಹತ್ವವನ್ನು ವಿವರಿಸಿದರು. ಅಮೃತ್ ರಾಜ್ ಸಮಗ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸ್ಥಳೀಯ ಭಾಷಾಭಿಮಾನಿಗಳು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹೈಲೈಟ್ಸ್:
-ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಟ್ ಭಟ್ ಎಡನೀರು ಅವರು ದಿ.ಪುಣಿಚಿತ್ತಾಯರೊಂದಿಗಿನ ಸಂಪರ್ಕ ನೆನಪಿಸಿ, ಪುಣಿಚಿತ್ತಾಯರು ತಾಳೆಯೋಲೆ ಗ್ರಂಥಗಳ ಶೋಧನೆಯ ವೇಳೆ ಅದರ ನಕಲು ಪ್ರತಿಗಳನ್ನು ಮಾಡುವಲ್ಲಿ ತಾನು ನೆರವಾದ ಬಗ್ಗೆ ತಿಳಿಸಿ, ತನ್ನ ಸಹಾಯದ ಬಗ್ಗೆ ಪುಣಿಚಿತ್ತಾಯರು ಉಲ್ಲೇಖಿಸಿರುವುದು ಜೀವನದ ಯೋಗವೆಂದು ತಿಳಿಸಿದರು.

  • ಶ್ರೀಹರಿ ಭಟ್ ಪೆಲ್ತಾಜೆ ಅವರು ಮೂಲ ಭಗವದ್ಗೀತೆಯನ್ನು ತುಳು ಭಾಷೆಗೆ ಅನುವಾದಿಸಿದ ಸಾಧಕರಾಗಿದ್ದು, ತಮ್ಮ ಅನುವಾದ, ಪ್ರಕಟಣೆಗಳ ಬಗ್ಗೆ ಅಮೂಲಾಗ್ರವಾಗಿ ವಿವರಿಸಿ ಕೃತಿ ಪ್ರಕಟಿಸುವಲ್ಲಿ ನೆರವಾದವರ ಬಗ್ಗೆ ನೆನಪಿಸಿದರು. ಈ ನಿಟ್ಟಿನಲ್ಲಿ ಹರಿಕೃಷ್ಣ ಪುನರೂರು ಅವರ ನಿರಂತರ ಬೆಂಬಲ ಕೃತಿಯ ಯಶಸ್ವಿ ನಿರ್ವಹಣೆಗೆ ನೆರವಾಯಿತು. ಜೊತೆಗೆ ಮಂಗಳೂರು ವಿ.ವಿ.ಯ ಪ್ರೊ.ಎಡಪಡಿತ್ತಾಯರ ಬೆಂಬಲ ಗಮನಾರ್ಹ ಎಂದರು.
  • ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಮತ್ತು ತುಳು ಭವನ ಸಮಿತಿಗಳ ಚಟುವಟಿಕೆಗಳ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ ಗಣ್ಯರು, ದಿ.ಪುಣಿಚಿತ್ತಾಯರ ಸ್ಮರಣೆ ಕಾರ್ಯಕ್ರಮ ಆಯೋಜಿಸುವಲ್ಲಿ ಆರಂಭದಿಂದಲೂ ಅಖಿಲೇಶ್ ನಗುಮುಗಂ ಮತ್ತವರ ತಂಡದ ನಿರಂತರ ಚಟುವಟಿಕೆಗಳು ಸ್ತುತ್ಯರ್ಹವಾಯಿತು.
SHARE
Loading spinner

Leave a Reply

Your email address will not be published. Required fields are marked *

error: Content is protected !!