ಮಂಗಳೂರು ವಿಮಾನ ನಿಲ್ದಾಣದಲ್ಲಿ 10 ನಿಮಿಷ ಉಚಿತ ಡ್ರಾಪ್ ಮತ್ತು ಪಿಕಪ್ ವ್ಯವಸ್ಥೆಗೆ ಆಗ್ರಹ; 10 ದಿನಗಳ ಗಡುವು

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿ ತೆರಳುವ ವಾಹನಗಳಿಗೆ ಕನಿಷ್ಠ 10 ನಿಮಿಷಗಳ ಉಚಿತ ಪ್ರವೇಶಾವಕಾಶ ನೀಡಬೇಕು. ಒಂದು ನಿಮಿಷ ಪಾರ್ಕಿಂಗ್ ಮಾಡದಿದ್ದರೂ ಟ್ಯಾಕ್ಸಿಗಳಿಗೆ ವಿಧಿಸಲಾಗುತ್ತಿರುವ ಅವೈಜ್ಞಾನಿಕ 180 ರೂ. ಶುಲ್ಕವನ್ನು ಕಡಿತಗೊಳಿಸುವುದರ ಜೊತೆಗೆ ನೂತನವಾಗಿ ವಿಧಿಸಲಾಗುತ್ತಿರುವ 50 ರೂ. ಪ್ರವೇಶ ಶುಲ್ಕವನ್ನೂ ರದ್ದುಗೊಳಿಸಬೇಕು. ಈ ಬೇಡಿಕೆಗಳನ್ನು ಈಡೇರಿಸಲು 10 ದಿನಗಳ ಗಡುವು ನೀಡುತ್ತಿದ್ದು, ಅಷ್ಟರೊಳಗೆ ಕ್ರಮ ಕೈಗೊಳ್ಳದಿದ್ದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಟ್ಯಾಕ್ಸಿ ಚಾಲಕರು ಒಟ್ಟಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಮಾಜಿ ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಂಸ್ಥೆ ವಹಿಸಿಕೊಂಡ ಬಳಿಕ ಪ್ರಯಾಣಿಕರು ಹಾಗೂ ಟ್ಯಾಕ್ಸಿ ಚಾಲಕರ ಮೇಲೆ ಹೆಚ್ಚುವರಿ ಶುಲ್ಕದ ಹೊರೆ ಬೀಳುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವಂತೆ ಹಲವು ಬಾರಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಹನಗಳಿಗೆ 12 ನಿಮಿಷಗಳವರೆಗೆ ಉಚಿತ ಪ್ರವೇಶಾವಕಾಶವಿದೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳಿಗೆ ಯಾವುದೇ ಉಚಿತ ಸಮಯಾವಕಾಶ ನೀಡದೆ 180 ರೂ. ಶುಲ್ಕ ವಿಧಿಸಲಾಗುತ್ತಿದೆ. ಇದೀಗ ಹೆಚ್ಚುವರಿಯಾಗಿ ಟ್ಯಾಕ್ಸಿ ಹಾಗೂ ಆಟೋರಿಕ್ಷಾಗಳು ವಿಮಾನ ನಿಲ್ದಾಣ ಪ್ರವೇಶಿಸಲು ಕೂಡ 50 ರೂ. ಪಾವತಿಸಬೇಕಾಗಿದೆ. ಪ್ರಯಾಣಿಕರನ್ನು ಇಳಿಸಿ ತಕ್ಷಣ ಹೊರಡುವ ವಾಹನಗಳಿಗೂ ಶುಲ್ಕ ವಿಧಿಸುವುದು ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ ಹೊರೆಯಾಗುತ್ತಿದೆ ಎಂದರು.

ಟ್ಯಾಕ್ಸಿ ಚಾಲಕರು ಈ ವೃತ್ತಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕಾನೂನುಬದ್ಧವಾಗಿ ಟ್ಯಾಕ್ಸಿ ಸೇವೆ ನೀಡುವವರು ಪ್ರತಿವರ್ಷ ವಾಹನದ ಫಿಟ್ನೆಸ್ ಪ್ರಮಾಣಪತ್ರ, ವಿಮೆ, ತೆರಿಗೆ ಹಾಗೂ ತಪಾಸಣೆಗಾಗಿ ಹಣ ಪಾವತಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನ ನಿಲ್ದಾಣದ ಹೆಚ್ಚುವರಿ ಶುಲ್ಕಗಳು ಅವರ ಆದಾಯದ ಮೇಲೆ ಪರಿಣಾಮ ಬೀರುತ್ತಿವೆ. ಖಾಸಗಿ ವಾಹನಗಳ ಮೂಲಕ ಅನಧಿಕೃತವಾಗಿ ಬಾಡಿಗೆ ಸೇವೆ ನೀಡುವವರಿಂದಲೂ ವೃತ್ತಿಪರ ಟ್ಯಾಕ್ಸಿ ಚಾಲಕರಿಗೆ ಸ್ಪರ್ಧೆ ಎದುರಾಗುತ್ತಿದೆ ಎಂದು ಹೇಳಿದರು. ಖಾಸಗಿ ವಾಹನಕ್ಕೆ ಯಾವುದೇ ಶುಲ್ಕ ವಿಧಿಸದೆ ತಾರತಮ್ಯ ಮಾಡಲಾಗುತ್ತಿದೆ

ವಿಮಾನ ನಿಲ್ದಾಣದಲ್ಲಿ ವಾಹನಗಳು ಕನಿಷ್ಠ 10 ನಿಮಿಷಗಳವರೆಗೆ ಉಚಿತವಾಗಿ ಪ್ರವೇಶಿಸಿ ಪ್ರಯಾಣಿಕರನ್ನು ಇಳಿಸಿ ತೆರಳಲು ಅವಕಾಶ ನೀಡಬೇಕು. ಆ ಬಳಿಕ ಶುಲ್ಕ ವಿಧಿಸುವುದಾದರೆ ಟ್ಯಾಕ್ಸಿಗಳಿಗೆ 100 ರೂ. ನಿಗದಿಪಡಿಸಿದರೂ ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ವಾಹನಗಳನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದರೆ ನಿಗದಿತ ಪಾರ್ಕಿಂಗ್ ಶುಲ್ಕ ಪಾವತಿಸಲು ನಮ್ಮ ವಿರೋಧವಿಲ್ಲ. ಆದರೆ ಪ್ರಯಾಣಿಕರನ್ನು ಇಳಿಸಿ ತಕ್ಷಣ ಹೊರಡುವ ವಾಹನಗಳಿಗೂ ಹೆಚ್ಚಿನ ಶುಲ್ಕ ವಿಧಿಸುವುದು ನ್ಯಾಯಸಮ್ಮತವಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಮಸ್ಯೆ ಪರಿಹರಿಸುವಂತೆ ಸಂಸದರು ಹಾಗೂ ಸ್ಥಳೀಯ ಶಾಸಕರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಜನಪ್ರತಿನಿಧಿಗಳು ಸಭೆ ನಡೆಸಿ ಪ್ರಯತ್ನ ಮಾಡಿದರೂ ಅದಾನಿ ಸಂಸ್ಥೆಯ ಅಧಿಕಾರಿಗಳಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಸಚಿವ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೂ ಸಮಸ್ಯೆಯನ್ನು ತರಲಾಗಿದೆ. ಹೀಗಾಗಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ರಘುಪತಿ ಭಟ್ ಒತ್ತಾಯಿಸಿದರು.

10 ದಿನಗಳ ಗಡುವು

ಟ್ಯಾಕ್ಸಿ ಚಾಲಕರ ಬೇಡಿಕೆಗಳನ್ನು ಈಡೇರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ 10 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಕನಿಷ್ಠ 10 ನಿಮಿಷಗಳ ಉಚಿತ ಪ್ರವೇಶಾವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಟ್ಯಾಕ್ಸಿ ಚಾಲಕರು ಒಗ್ಗೂಡಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಯಾಣಿಕರಷ್ಟೇ ಅಲ್ಲದೆ ಕಾಸರಗೋಡು ಹಾಗೂ ಕೊಡಗು ಭಾಗದ ಜನರೂ ಅವಲಂಬಿಸಿದ್ದಾರೆ. ಆದ್ದರಿಂದ ಪ್ರಯಾಣಿಕರ ಹಿತಾಸಕ್ತಿ ಮತ್ತು ಟ್ಯಾಕ್ಸಿ ಚಾಲಕರ ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮ್ಯಾನ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ರಿಜಿಸ್ಟರ್ಡ್ ಇದರ ಅಧ್ಯಕ್ಷರಾದ ಆನಂದ ಕೆ. ಹಾಗೂ ಪ್ರಮುಖರಾದ ರಮೇಶ್ ಕೆ. ಕೋಟ್ಯಾನ್, ಹರೀಶ್ ಶೆಟ್ಟಿ ಕುತ್ತಾರು , ರಾಜೇಶ್, ಅಜೀಜ್ ದೇರಳಕಟ್ಟೆ ಮತ್ತು ಸುರೇಶ್ ಸಾಲಿಯನ್ ಉಪಸ್ಥಿತರಿದ್ದರು ..

SHARE
Loading spinner

Leave a Reply

Your email address will not be published. Required fields are marked *

error: Content is protected !!