ಪಕ್ಷಿ ಗಣತಿ 2026 – ಪಕ್ಷಿಗಳ ಲೋಕ ಹೊಕ್ಕಾಗ … !

ಮನೆಯ ಮುಂದೆ ಮಹಾನಗರ ಪಾಲಿಕೆ ಆವರಣದ ದೊಡ್ಡ ದೊಡ್ಡ ಮರಗಳು, ಅವುಗಳ ಗೆಲ್ಲು, ಎಲೆಗಳ ನಡುವಿನಿಂದ ಹಕ್ಕಿಗಳ ಚಿಲಿಪಿಲಿ ರಾಗ ಬೆಳಗಾದಂತೆಲ್ಲಾ ಕಿವಿಗೆ ಇಂಪಾಗಿ ಕೇಳಿಸುತ್ತದೆ. ಅತ್ತ ಸೂರ್ಯ ದೇವರು ಪ್ರತಿದಿನವೂ ಬೆಳಕನ್ನು ಹರಿಸಿ ಎಬ್ಬಿಸಿದರೆ, ಇತ್ತ ಹಕ್ಕಿಗಳ ಕಲರವವು ಅಲರಾಂನಂತೆ ʼಬೆಳಗಾಯಿತು ಏಳಿʼ ಎಂದು ಎಚ್ಚರಿಸಿ ನಿತ್ಯದ ಸಹಜ ಜೀವನವು ನಮಗೆ ತಿಳಿಯದೇ ಸಾಗುತ್ತಿತ್ತು. ಹಸುರು ಮರಗಳನ್ನು ರಕ್ಷಿಸಿಕೊಂಡು ಬಂದಂತಹ ನಗರಪಾಲಿಕೆಯನ್ನು ಪ್ರತಿದಿನವೂ ಸ್ಮರಿಸುತ್ತಾ, ಎಂದಿನಂತೆ ರೇಡಿಯೋ ಆಲಿಸಿಕೊಂಡು ಮಂಜಾವಿನ ಉಪಹಾರದ ವ್ಯವಸ್ಥೆಗೆ ತಯಾರಿ ಮಾಡುತ್ತಿರುವಾಗ ಮೊಬೈಲಿನಿಂದ 7.05ಗಂಟೆಗೆ ಸರಿಯಾಗಿ ಪ್ರದೇಶ ಸಮಾಚಾರದವರು ಪಕ್ಷಿಗಳ ಬಗ್ಗೆ ಏನೋ ಹೇಳಿದ್ದನ್ನು ಕೇಳಿಸಿಕೊಂಡೆ. ಈ ಬಾರಿಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಕ್ಟೋಬರ್‌ 30 ರಿಂದ ನವೆಂಬರ್‌ 2ರವರೆಗೆ ʼಕರ್ನಾಟಕ ರಾಜ್ಯೋತ್ಸವ ಪಕ್ಷಿ ಗಣತಿ 2026ʼ ಅಭಿಯಾನವನ್ನು ಆಯೋಜಿಸಲಾಗಿದೆ, ಪಕ್ಷಿ ಪ್ರೇಮಿಗಳು, ಪ್ರಕೃತಿ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಬಹುದುʼ ಎಂದರು. ಓ ಹೌದಲ್ಲ ಅಕ್ಟೋಬರ್‌, ನವೆಂಬರ್‌ ತಿಂಗಳು ಹತ್ತಿರ ಬರುತ್ತಿದೆ, ಅಕ್ಟೋಬರ್‌ ಬಂದಂತೆ ಪ್ರಪಂಚದಾದ್ಯಂತ ಹಕ್ಕಿಗಳು ನಮ್ಮ ಊರಿಗೆ ವಲಸೆ ಬರುವ ಸಮಯ, ಅಷ್ಟೇ ಅಲ್ಲ ಸರಕಾರ ಮಾತೃಭಾಷೆಯ ರಕ್ಷಣೆಯೊಂದಿಗೆ, ಪರಿಸರ ರಕ್ಷಣೆಯ ಕೆಲಸವನ್ನೂ ಕೈಗೊಂಡಿದೆ, ಒಳ್ಳೆಯ ಯೋಚನೆ-ಯೋಜನೆ ಎಂದು ಎಣಿಸುತ್ತಾ, ಕೂಡಲೇ ಬೆಳಗ್ಗಿನ ಕಾರ್ಯದಲ್ಲಿ ನಿರತನಾಗಿದ್ದ ಮಗ ಸಾತ್ವಿಕನನ್ನು ಕರೆದು ʼನೋಡೋ ಸಾತ್ವಿಕ್‌ ʼಪಕ್ಷಿಗಳ ಬಗ್ಗೆ ಪಕ್ಷಿಗಣತಿ ನಡೆಯುತ್ತಾ ಇದೆಯಂತೆ ಒಳ್ಳೆಯ ಕಾರ್ಯʼ ಎಂದು ತಿಳಿಸಿದೆ. ಅವನಿಗೆ ಪ್ರಾಣಿ-ಪಕ್ಷಿ ಪ್ರಪಂಚ ಅಂದರೆ ತುಂಬಾ ಇಷ್ಟ. ಹೌದಮ್ಮ ಅದರ ಬಗ್ಗೆ ನನಗೆ ತಿಳಿದಿದೆ. ರಾಜ್ಯಾದ್ಯಂತ ಈ ಬಗೆಗೆ ಕೆಲಸ ಕಾರ್ಯಗಳೂ ನಡೆಯುತ್ತಾ ಇದೆ. ನಾನೂ ಕೂಡ ಅದೇ ಕಾರ್ಯದಲ್ಲಿ ನಿರತನಾಗಿದ್ದೇನೆ ಅಮ್ಮʼ ಎಂದು ತಿಳಿಸಿದ. ಅಲ್ಲ ಮಗನೇ ಪಕ್ಷಿಗಳ ಗಣತಿ ಮಾಡಿ ಏನು ಪ್ರಯೋಜನ? ಅವರ ಯೋಜನೆಯ ಉದ್ದೇಶವಾದರೂ ಏನು? ಎಂದು ಕೇಳಿದೆ. ಈ ಯೋಜನೆಯ ಹಿಂದೆ ಹಲವಾರು ಉದ್ಧೇಶಗಳಿವೆ ಅಮ್ಮ. ಕನ್ನಡ ರಾಜ್ಯೋತ್ಸವ ಆಚರಿಸುವ ಜೊತೆಗೆ ನೈಸರ್ಗಿಕ ಪರಂಪರೆಯ ಉಳಿವಿಗಾಗಿ ಪಕ್ಷಿಗಳ ವಾಸದ ಕುರಿತು ದೀರ್ಘಕಾಲೀನ ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸುವುವ ಕೆಲಸ ನಡೆಯುತ್ತಿದೆ. ಮುಖ್ಯವಾಗಿ ಕರ್ನಾಟಕದಲ್ಲಿ 550 ಪಕ್ಷಿ ಪ್ರಭೇಧಗಳಿದ್ದು, ಅವುಗಳು ವಾಸಿಸುವ ಕಾಡು, ಪೊದೆ, ಕೃಷಿ ಹೊಲ, ಸರೋವರ, ಉದ್ಯಾನಗಳು ಹೀಗೆ ಎಲ್ಲಾ ಕಡೆಯಲ್ಲೂ ಅವುಗಳ ಬಗ್ಗೆ ಸಮಗ್ರವಾಗಿ ದಾಖಲಿಸಿ ಅವುಗಳ ಸಂರಕ್ಷಣೆಗಾಗಿ ಯೋಜನೆಗಳನ್ನು ಹಮ್ಮಿಕೊಂಡು ಪಕ್ಷಿ ಸಂಕುಲವನ್ನು ಉಳಿಸುವುದಾಗಿದೆ. ಅದನ್ನು ಕೇವಲ ಅಧಿಕೃತ ಅರಣ್ಯ ಇಲಾಖೆಯ ಸಮೀಕ್ಷೆಗಳಿಂದ ಪಡೆಯದೇ ಸಾರ್ವಜನಿಕರು, ಪ್ರಕೃತಿ ಪ್ರೇಮಿಗಳು, ಪಕ್ಷಿ ವೀಕ್ಷಕರು, ವಿದ್ಯಾರ್ಥಿಗಳು ಹೀಗೆ ಎಲ್ಲರನ್ನೊಳಗೊಂಡು ನಡೆಸುವಂತಹ ಯೋಜನೆ. ಪಕ್ಷಿ ಪ್ರಪಂಚ ಬಹಳ ಸುಂದರವಾಗಿದೆ ಅಮ್ಮ. ವೇಗವಾಗಿ ಬದಲಾಗುತ್ತಿರುವ ಈ ಕಾಲದಲ್ಲಿ ಅಗತ್ಯವಾಗಿ ಪಕ್ಷಿಗಳ ಬಗ್ಗೆಯೂ ಕಾಳಜಿ ವಹಿಸಿರುವುದು ಸರಿಯಾದ ನಿರ್ಧಾರ.


ದಸರ ಹಬ್ಬದ ಸಾಲಾಸಾಲು ರಜೆಯನ್ನು ಹೇಗೆ ಕಳೆಯುವುದು ಎಂಬ ಬಗ್ಗೆ ಮನೆಯಲ್ಲಿ ಚರ್ಚೆ ಕೂಡ ನಡೆಯುತ್ತಾ ಇತ್ತು. ಮಂಗಳೂರಿನ ಮಹಾನಗರದ ನಾಲ್ಕು ಗೋಡೆಗಳ ಮಧ್ಯೆ ವಾರ ಪೂರ್ತಿ ಕಳೆಯಬೇಕಾದ ಈ ಕಾಲದಲ್ಲಿ ಪ್ರಕೃತಿಯನ್ನು ಗ್ರಹಿಸುವುದಾಗಲಿ, ವಾತಾವರಣದ ವಿಸ್ಮಯನ್ನು ವೀಕ್ಷೀಸುವುದಾಗಲಿ ಸಮಯವೂ ಇಲ್ಲ. ಸಂದರ್ಭವೂ ಇಲ್ಲದಂತಾಗಿದೆ ಈ ಕಾಲದಲ್ಲಿ. ಮೊನ್ನೆ ಊರಿಂದ ಗುಣಮಾಮನವರು ಕುಟುಂಬದ ಮನೆಯಲ್ಲಿ ಪೂಜೆ ಇದೆ ಬರಬೇಕು ಎಂದಿದ್ದರು. ಹಾಗಾದರೆ ನಾವು ಪಶ್ಚಿಮಘಟ್ಟದ ತಳಹದಿಯಲ್ಲಿರುವ ರೆಂಜಾಳಕ್ಕೆ ಹೋಗುವ ಎಂದು ನಿರ್ಧರಿಸಿದೆವು. ಆಧುನಿಕತೆಯ ಅಲ್ಪ ಸ್ಪರ್ಶ ಪಡೆದಿದ್ದರೂ ಇನ್ನು ಕಾಡು, ಗುಡ್ಡ, ಗದ್ದೆ, ಶುದ್ಧ ಸ್ಪಟಿಕದಂತೆ ಹರಿಯುವ ನೀರನ್ನು ಉಳಿಸಿಕೊಂಡು ಕಂಗೊಳಿಸುವ ಹಚ್ಚಹಸುರಿನ ನಿಸರ್ಗ, ಪ್ರಾಣಿ-ಪಕ್ಷಿಗಳೊಂದಿಗೆ ಸುಂದರ ಬದುಕು ನಡೆಸುತ್ತಿರುವ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮಕ್ಕೆ ಹೋಗಲು ನಿರ್ಧರಿಸಿದೆವು.
ದೇವಾಲಯಗಳ ಬೀಡು, ತಿಳಿದವರ ಊರು, ಸುಶಿಕ್ಷಿತರ ಕುಡ್ಲ, ಬುದ್ಧಿವಂತರ ತುಳು ನಾಡು, ಆಧುನಿಕತೆ ಪಡೆದ ದಕ್ಷಿಣ ಕನ್ನಡ, ಎಂದೆಲ್ಲಾ ಪ್ರಸಿದ್ಧಿ ಪಡೆದ ಮಂಗಳೂರಿನ ಈಗಿನ ಪರಿಸ್ಥಿತಿಯನ್ನು ಕುರಿತು ಚರ್ಚೆ ಮಾಡುತ್ತಾ ನಡೆದೆವು. ಪ್ರತಿದಿನವೂ ಎರಡು ಮೂರು ಬಾರಿ ಮನೆಬಾಗಿಲಿಗೆ, ಅಂಗಡಿ ಮುಂಗಟ್ಟುಗಳ ಮುಂದೆ ಬಂದು ಕಸ ತಗೊಂಡು ಹೋಗಲು ಮಹಾನಗರ ಪಾಲಿಕೆಯವರು ಬಂದರೂ ಕೂಡ ಎಲ್ಲಂದರಲ್ಲಿ ಕಸ ಹಾಕಿ ಮನುಷ್ಯರೇ ಬದುಕಲು ಅಸಾಧ್ಯವಾದ ಪರಿಸರವು ನಿರ್ಮಾಣವಾದಂತಿದೆ. ಇನ್ನು ಪ್ರಾಣಿ ಪಕ್ಷಿಗಳ ವಾಸ ಸಾಧ್ಯನಾ? ಎಂದು ಪಾಂಡೇಶ್ವರದಿಂದ ನಗರದ ಹೃದಯ ಭಾಗ ಸ್ಟೇಟ್‌ಬ್ಯಾಂಕ್‌ ಪರಿಸರವನ್ನು ದಾಟಿ ಹೋಗುವಾಗ ಅನ್ನಿಸಿತು. ಇಂದು ಒಂದು ದಿನದ ಕತೆಯಲ್ಲ, ಪ್ರತಿ ದಿನವೂ ಇಡೀ ಸ್ಟೇಟ್‌ಬ್ಯಾಂಕ್‌ ಪರಿಸರ ಕಸದಿಂದ ತುಂಬಿರುತ್ತದೆ. ದೊಡ್ಡ ದೊಡ್ಡ ಉದ್ಯಮಗಳನ್ನು ಹೊಂದಿರುವ ಮಳಿಗೆದಾರರೂ ರಾತ್ರಿಯಾದ ಕೂಡಲೇ ತಮ್ಮ ಬೇಡದ ಕಸವನ್ನು ಅಂಗಡಿ ಮುಂಗಟ್ಟಿನ ಮುಂದೆ ಇಟ್ಟು ಹೋಗುತ್ತಾರೆ. ಮರು ದಿನ ಪ್ರಾಣಿ ಪಕ್ಷಿಗಳೋ ಕೊಳೆತ ವಿಷಕಾರಿ ಹಾಗೂ ವಾಸನೆಯಿಂದ ತುಂಬಿದ ಹಸಿ-ಒಣಕಸದ ರಾಶಿಯನ್ನು ಚಲ್ಲಾಪಿಲ್ಲಿಯಾಗಿಸುತ್ತದೆ. ಅದರ ಮದ್ಯೆಯೇ ಆ ದಿನಕ್ಕೆ ಮಾರಾಟ ಮಾಡಬೇಕಾದ ಹೊಟೇಲು ತಿಂಡಿಗಳು, ಮೀನು ಮಾಂಸ, ತರಕಾರಿಗಳನ್ನು ಆಕರ್ಷಕವಾಗಿ ಜೋಡಿಸಿ ಗ್ರಾಹಕರಿಗಾಗಿ ಅಂಗಡಿ ಮಾಲಿಕರು ಕಾಯುತ್ತಿರುತ್ತಾರೆ. ಇದು ಎಷ್ಟು ಸಭ್ಯವಾದುದು. ಇದಕ್ಕಾಗಿ ನಗರಪಾಲಿಕೆಯವರು ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಬಾರದೇಕೆ? ಸ್ವಚ್ಛವಾಗಿದ್ದರೆ ಮನುಷ್ಯನಷ್ಟೇ ಅಲ್ಲ ಪ್ರಾಣಿ ಪಕ್ಷಿಗಳೂ ಸುಂದರವಾಗಿ ಬದುಕಬಹುದಲ್ಲ ಎಂದು ನಾವು ನಾವೇ ಮಾತನಾಡುತ್ತಾ ಮುಂದುವರಿದೆವು. ಅಷ್ಟೇ ಅಲ್ಲ ಮೀನು ಮಾಂಸಗಳನ್ನು ಸಾಗಿಸುವ ವಾಹನಗಳು ಮಾರ್ಗದುದ್ದಕ್ಕೂ ಅದರ ನೀರನ್ನು ಸುರಿಸಿಕೊಂಡು ಹೋಗುವುದು ಯಾತಕ್ಕಾಗಿ? ಇದರಿಂದ ಇಡೀ ಊರೇ ವಾಸನೆಯಿಂದ ಕೂಡಿದೆಯಲ್ಲ. ಒಂದು ಕಾಲದಲ್ಲಿ ಮರಗಿಡ. ಸ್ವಚ್ಛಪರಿಸರದಿಂದ ಕೂಡಿದ ಊರು ಇಂದು ನಗರವನ್ನಾಗಿಸಿ ಹಾಳುಗೆಡವುತ್ತಿದ್ದೇವೇಯೋ ಎಂದು ಬಾಸವಾಗುತ್ತದೆ. ಅಂಗಡಿ ಮಾಲಿಕರೂ ಹೊಸ ವಸ್ತುಗಳನ್ನು ಸರಿಯಾದ ವ್ಯವಸ್ಥೆಯಲ್ಲಿ ಹೇಗೆ ಮಾರಾಟ ಮಾಡುತ್ತಾರೋ ಅದೇ ರೀತಿ ಕಸಕಡ್ಡಿಗಳಿಗೂ ವ್ಯವಸ್ಥೆ ಮಾಡಿದರೇ ಸುಂದರ ನಗರವಾಗುವುದಿಲ್ಲವೇ?, ಅದೇ ಸ್ವಚ್ಛತೆಗೆ ಪರಿಹಾರವಲ್ಲವೇ? ಇದರ ಬಗೆಗೆ ಅಂಗಡಿ ಮಾಲಿಕರು ಗಮನ ಹರಿಸಿದರೆ ಸುಲಭವಾಗಿ ಪರಿಹರಿಸಬಹುದು ಎಂದು ಎಣಿಸುತ್ತಾ ಮುಂದೆ ಸಾಗುತ್ತಿದ್ದಂತೆ ದಾರಿಯುದ್ದಕ್ಕೂ ಅಲ್ಲಲ್ಲಿ ಕಸವನ್ನು ಬೀಸಾಡಿದ್ದರೂ ಇನ್ನೂ ನಮ್ಮ ನಗರಭಾಗದಂತಾಗಿರಲಿಲ್ಲ. ಆದರೂ ಅವರೂ ಕಸ ತುಂಬಿದ ನಾಡನ್ನಾಗಿಸುವ ಪ್ರಯತ್ನದಲ್ಲಿದ್ದಾರೆ ಎಂದನಿಸಿತು. ಹಾಗಾಗದೇ ಈಗಿನಿಂದಲೇ ನಾವೆಲ್ಲ ಎಚ್ಚೆತ್ತುಕೊಂಡು ನಮ್ಮ ಪರಿಸರವನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಂದುಕೊಂಡು ಸಾಗಿದೆವು.


ಹಿಂದೆಲ್ಲಾ ಪ್ರಕೃತಿಯಲ್ಲಿರುವ ಹೂವು, ಹಣ್ಣು, ಕಾಯಿ, ಗುಡ್ಡ, ಕಾಡು, ಗಿಡ, ಮರ, ಗದ್ದೆ, ಪ್ರಾಣಿ ಪಕ್ಷಿಗಳ ಹೆಸರನ್ನೇ ಊರಿಗಿಡುತ್ತಿದ್ದರು. ಪಿಲಿಕುಲ, ಗುರುಪುರ, ಕಕ್ಕೆಪದವು, ಎಡಪದವು, ಬಿದಿರಿನ ನಾಡು ಮೂಡುಬಿದಿರೆ ಹೀಗೆ ಸ್ಥಳನಾಮಗಳು ಅಲ್ಲಿನ ಪ್ರಕೃತಿ, ಸಸ್ಯಸಂಪತ್ತು ಹಾಗೂ ಭೌಗೋಳಿಕ ಲಕ್ಷಣಗಳನ್ನು ಆಧರಿಸಿ ಊರಿಗೆ ಹೆಸರಿಡುತ್ತಿದ್ದರು. ಇಂದು ಮನುಷ್ಯರ ಮಾತ್ರ ಭೂಮಿಯಾಗಿದೆ. ಹಾಗಾಗಿ ಮನುಷ್ಯರ ಹೆಸರೇ ಊರಿನ ಹೆಸರಾಗಿ ಬದಲಾಗುತ್ತಿದೆ. ಇಲ್ಲಿ ನಾನು ರೆಂಜಾಳದ ಊರ ಹೆಸರು ಹೇಳ ಹೊರಟಿದ್ದೇನೆ. ʼರೆಂಜಾಳ” ಎಂಬ ಹೆಸರು ಒಂದು ಹೂವಿನ ಹೆಸರಿನಿಂದ ಬಂದಿದೆ. ತುಂಬಾ ಪರಿಮಳದ ಹೂವು ʼರೆಂಜೆʼ ಅಥವಾ ತುಳುವಿನಲ್ಲಿ ʼರೆಂಜೇವುʼ ಹೂವಿನ ಮರಗಳು ಹೆಚ್ಚಾಗಿದ್ದುದರಿಂದ ಈ ಹೆಸರು ಬಂದಿದೆ ಎಂದು ತಿಳಿದವರು ಹೇಳುತ್ತಾರೆ ಹಾಗೂ ನಮಗೂ ಆ ಹೆಸರು ಕೇಳಿದೊಡನೆಯೇ ಬಾಲ್ಯದಲ್ಲಿ ಆ ಬಿಳಿ ಹೂವುಗಳನ್ನು ಹೆಕ್ಕಿ ಬಾಳೆಹಗ್ಗ(ಬಾರೆದಬಲ್ಲ್‌)ದಿಂದ ಕಟ್ಟಿ ದೇವರಿಗೆ ಹಾಕಿದರೆ ಸುಮಾರು ದಿನಗಳ ವರೆಗೆ ಪರಿಮಳ ಬೀರಿ ತಾಜಾವಾಗಿದ್ದುದು ನೆನಪಿಗೆ ಬರುತ್ತದೆ. ಅಷ್ಟೇ ಅಲ್ಲ ಉದ್ದ ಕೂದಲಿನ ಮನೆಯ ಹೆಣ್ಣುಮಗಳ ಜಡೆಯು ಈ ಹೂವಿನಿಂದ ಅಲಂಕೃತಗೊಳ್ಳುತ್ತಿತ್ತು. ಇನ್ನು ಈ ಊರಿನಲ್ಲಿ ತಲೆ ಎತ್ತಿ ನೋಡಿದರೆ ಈಡೀ ಊರನ್ನು ಅಡ್ಡಲಾಗಿ ಆವರಿಸಿರುವ ಪಶ್ಚಿಮಘಟ್ಟದ ಸಾಲುಗಳು ಕಣ್ಮನವನ್ನು ಸೆಳೆಯುವಂತದೆ. ಹೆಸರು ಎಷ್ಟು ಸುಂದರವಾಗಿದೆಯೋ ಅಷ್ಟೇ ಸುಂದರ ಪರಿಸರವನ್ನು ಆ ಊರಿನ ನಮ್ಮ ಜನ ಉಳಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಕೃತಜ್ಞತೆಯನ್ನು ತಿಳಿಸಬೇಕು.


ಮನೆಯು ಸಮೀಪಿಸುತ್ತಿದ್ದಂತೆ ನವಿಲುಗಳ ಕೂಗಾಟ ಈಗ ಎಲ್ಲಂದರಲ್ಲಿ ಕೇಳಿ ಬರುತ್ತಿದೆ. ಹಿಂದೆ ನಾವು ನವಿಲು ನೋಡಬೇಕಾದರೆ ಉದ್ಯಾನವನಕ್ಕೋ, ಪ್ರಾಣಿ ಸಂಗ್ರಹಾಲಯಕ್ಕೋ ಹೋಗಬೇಕಿತ್ತು. ಇಂದು ನಮ್ಮ ಸುತ್ತ ಮುತ್ತಲೇ ಪ್ರತ್ಯಕ್ಷವಾಗಿ ಗರಿ ಬಿಚ್ಚಿಕೊಂಡು ಕುಣಿಯುವ ಸೌಂದರ್ಯವನ್ನು ನೋಡಲು ಬಲು ಅಂದ. ಆದರೆ ಕೃಷಿ ಮಾಡುವವರಲ್ಲಿ ಇದರ ಬಗ್ಗೆ ತಾತ್ಸಾರದ ಮನೋಭಾವ ಇದೆ. ಯಾಕೆಂದರೆ ನವಿಲು ಬೆಳೆ ನಾಶ ಮಾಡುತ್ತದೆ ಎಂದು ತಿಳಿಸುತ್ತಾರೆ. ಸಾತ್ವಿಕನಲ್ಲಿ ಕೇಳದೆ “ಹೌದಲ್ವ ಈಗ ನವಿಲು ಕಾಡು ಬಿಟ್ಟು ನಾಡಿನಲ್ಲಿ ಸಂಚರಿಸುವುದು ಏತಕ್ಕೆ?” ಎಂದೆ. “ನೋಡಿ ಅಮ್ಮ ನಾವು ಶಾಲೆಯಲ್ಲಿ ಆಹಾರ ಸರಪಣಿಯ ಬಗ್ಗೆ ಕಲಿತಿದ್ದೇವೆ. ಅಂದರೆ ಒಂದು ಪ್ರಾಣಿಯನ್ನು ಅವಲಂಬಿಸಿ ಇನ್ನೊಂದು ಪ್ರಾಣಿ ಬದುಕುತ್ತದೆ. ಆದರೆ ಇಂದು ಕಾಡು ನಾಶವಾಗಿ ಎಷ್ಟೋ ಪ್ರಾಣಿಗಳ ಸಂತಾನ ಅಳಿದು ಹೋಗಿದೆ. ಉದಾಹರಣೆಗೆ ನಮ್ಮ ಗಾದೆಗಳಲ್ಲಿ ನರಿಯ ಬಗ್ಗೆ ಎಷ್ಟು ಕತೆ, ಗಾದೆ, ಒಗಟುಗಳಿವೆ. ನಮ್ಮ ಸುತ್ತ ಮುತ್ತಲೂ ಇಂತಹ ಪ್ರಾಣಿಗಳು ಇಲ್ಲದೇ ಇರುತ್ತಿದ್ದರೆ ಇಂತಹ ಸುಂದರ ಕತೆಗಳನ್ನು ಕಟ್ಟುತ್ತಿದ್ದರೆ? ಜಾಣನಾಗಿ ಬದುಕಿದರೆ ನಿಮ್ಮನ್ನು ನರಿಗೆ ಹೋಲಿಸುತ್ತಿರಲಿಲ್ಲವೇ? ಮಳೆ-ಬಿಸಿಲು ಒಟ್ಟಿಗೆ ಬಂದರೆ ʼಕುದ್ಕನಿಗೆ ಮದುವೆ” ಎನ್ನುತ್ತಿದ್ದರಲ್ಲವೇ? ಇಂದು ನರಿಗಳಿವೆಯೇ? ಇಲ್ಲ. ಅಷ್ಟೇ ಅಲ್ಲ ನವಿಲನ್ನು ತಿನ್ನುವ ಪ್ರಾಣಿಗಳಾದ ಚಿರತೆ, ಹುಲಿ, ತೋಳಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಆದುದರಿಂದ ನವಿಲುಗಳ ಸಂಖ್ಯೆ ಹೆಚ್ಚಾಗಿದೆ. ಕಾಡು ಕಡಿಮೆಯಾಗಿ ಅವು ಕಾಡು ಬಿಟ್ಟು ನಾಡು ಸೇರಿ ತಮ್ಮ ಬದುಕಿಗಾಗಿ ನಮ್ಮ ಬೆಳೆಯನ್ನು ನಾಶ ಮಾಡುತ್ತದೆ ಎಂದ. ಆದರೆ ನವಿಲನ್ನು ದೂರುವಂತಿಲ್ಲ, ಯಾಕಂದರೆ ಅದು ವಿಷಕಾರಿ ಹಾವುಗಳ ಮರಿಗಳನ್ನು ತಿಂದು ಹಾವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದು ಒಂದು ಉದಾಹರಣೆ ಅಮ್ಮ. ಹೌದು ಹಿಂದೆಲ್ಲ ನಮ್ಮ ಮನೆಯ ಜಗುಲಿಯಲ್ಲಿ ಗುಬ್ಬಿಗಳು ವಾಸವಾಗಿದ್ದವು ಇಂದು ಕಾಣ ಸಿಗುವುದಿಲ್ಲ ಯಾಕಂದರೆ ನಾವು ನಿರ್ಮಿಸುವ ಮನೆಗಳ ಶೈಲಿ ಬದಲಾಗಿದೆ. ಹಿಂದೆ ಮಣ್ಣು, ಮರ, ಹಂಚಿನಿಂದ ಮನೆ ಕಟ್ಟುತ್ತಿದ್ದರೆ ಅವುಗಳನ್ನು ಅವಲಂಬಿಸಿ, ಗೂಡುಕಟ್ಟಿಕೊಂಡು ಮನೆಯ ಮಕ್ಕಳಂತೆ ಅಂಗಳದಲ್ಲಿ ಚೀವ್‌ ಚೀವ್‌ ಎಂದು ಹಾರಾಡುತ್ತಿದ್ದವು. ಇಂದು ನಮ್ಮ ಮನೆಯ ಶೈಲಿ ಬದಲಾಗಿದೆ ಸಿಮೆಂಟು, ಗಾಜು, ಪ್ಲಾಸ್ಟಿಕ್‌ನಿಂದ ಮನೆಗಳನ್ನು ಕಟ್ಟುತ್ತೇವೆ ಹಾಗಾಗಿ ಅವುಗಳನ್ನು ತೂತು ಮಾಡಿ ಗೂಡು ಕಟ್ಟಲು ಅಸಾದ್ಯವಾದ ಕಾರಣ ಅವುಗಳು ನಮ್ಮ ಪರಿಸರದಿಂದ ದೂರವಾಗಿದೆ. ಈಗಿನ ನಮ್ಮ ಮನೆಗಳ ವಾಸವು ಪಾರಿವಾಳಕ್ಕೆ ಹೆಚ್ಚು ಅನುಕೂಲವಾಗಿರುವುದರಿಂದ ಈಗ ನಮ್ಮ ಸುತ್ತ ಮುತ್ತಲೂ ಪರಿವಾಳಗಳು ಹೆಚ್ಚು ಹೆಚ್ಚು ಕಾಣ ಸಿಗುತ್ತದೆ. ಅಷ್ಟೇ ಅಲ್ಲ ಈಗ ಕಾಗೆಗಳೆಲ್ಲಿವೆ? ಹಿಂದೆಲ್ಲಾ ಮನೆಗೆ ನೆಂಟರು ಬರುವರು ಎಂದು ಕಾಗೆಗಳೇ ತಿಳಿಸುತ್ತಿದ್ದವು. ಕಾಗೆ ಕಾ…ಕಾ… ಎಂದು ಕರೆದರೆ ಸಾಕು ʼಓ ಇಂದು ಅತಿಥಿಗಳು ಬರುವರುʼ ಎಂದು ಹೇಳಿ ಸಂಭ್ರಮಿಸುತ್ತಿದ್ದೆವು. ವಿವಿಧ ತಿಂಡಿ ಪಾಕಗಳನ್ನು ತಯಾರು ಮಾಡುತ್ತಿದೆವು. ಆದರೆ ಇಂದು ನಾವು ಕೃಷಿಗೆ ಸಿಂಪಡಿಸುವ ವಿಷಯುಕ್ತ ಕೀಟನಾಶಕದಿಂದಲೋ, ಅಥವಾ ಆಧುನಿಕ ಕೃಷಿ ಸಂಸ್ಕರಣ ಪ್ರಕ್ರಿಯೆಯಿಂದಲೋ ಕಾಗೆಗಳ ಸಂಖ್ಯೆ ಕಡಿಮೆಯಾಗಿರಬಹುದು. ಅದಕ್ಕೆ ಇಂದು ನಾವು ಹಿರಿಯರಿಗೆ ಪಿತೃ ಸಂಸ್ಕಾರ ಮಾಡಬೇಕಾದರೆ ಕಾಗೆಗಳೇ ಬರುವುದಿಲ್ಲ. ಅವುಗಳ ಕೊರತೆಯ ಬಗ್ಗೆ AIಯಲ್ಲಿ ಕಾಗೆಗಳ ವಿಡಿಯೋ ತುಣುಕುಗಳನ್ನು ನೋಡುವಾಗ ಅದನ್ನು ನೋಡಿ ಒಮ್ಮೆ ನಗು ಬಂದರೂ ನಮ್ಮ ಪರಿಸರ ಎತ್ತ ಕಡೆ ಸಾಗುತ್ತಿದೆ? ಎಂದು ಬೇಸರವಾಗುತ್ತದೆ. ಹಾಗಾಗಿ ನಾವು ಆದಷ್ಟು ಸಾವಯವ ಗೊಬ್ಬರವನ್ನು ಬಳಸುವುದರಿಂದ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿ-ಪಕ್ಷಿಗಳ ಬದುಕಿಗೂ ಸಹಾಯಕವಾಗಬಹುದು. ಹೌದು ಅದೇ ಉದ್ದೇಶದಿಂದ ಸರಕಾರ ಈ ಯೋಜನೆಗಳನ್ನು ಹಾಕಿಕೊಂಡು ಅವುಗಳ ಉಳಿವಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ.
ಪರಿಸರದಲ್ಲಿ ಕೊಕ್ಕರೆಗಳ ಉಪಯೋಗವೂ ಬಹಳವಿದೆ. ಮನೆಯ ಮುಂದಿನ ಭತ್ತದ ಗದ್ದೆಯಲ್ಲಿ ಅಲ್ಲಲ್ಲಿ ಸುಂದರವಾದ ಬಿಳಿ ಕೊಕ್ಕರೆ ಪಕ್ಷಿಗಳು ತಲೆ ಕೆಳಗೆ ಹಾಕಿ ಕುಕ್ಕಿ, ಕುಕ್ಕಿ ತಿನ್ನುತ್ತಿದ್ದವು, ಬಿಳಿ ಹಾಲ ತೆನೆ ಪೈರುಕಟ್ಟಿ ಬಂಗಾರದ ಬಣ್ಣದಿಂದ ಗಾಳಿಗೆ ಬಾಗಿ ನಿಂತಿದೆ. ಹುಳು ಹುಪ್ಪಡಿಗಳು ಪೈರನ್ನು ನಾಶ ಮಾಡುತ್ತದೆ. ಆ ಸಮಯದಲ್ಲಿ ಕೊಕ್ಕರೆಗಳು ಕೀಟಗಳನ್ನು ತಿಂದು ಬೆಳೆಯನ್ನು ರಕ್ಷಿಸುತ್ತದೆ. ಪೇರಳೆ ಮರದಲ್ಲಿ ರಾಂಪ ಗಿಳಿಗಳು ಹಣ್ಣನ್ನು ತಿಂದು ಬೀಜಪ್ರಸರಣೆಯಲ್ಲಿ ತೊಡಗುತ್ತಿತ್ತು. ಪಕ್ಷಿಗಳ ಉಪಯೋಗ ಎನೆಲ್ಲಾ ಇದೆ ಎಂದು ಯೋಚಿಸಿದಾಗ ಹಳೆಯ ಹಲವಾರು ನಂಬಿಕೆಗಳು ಒಮ್ಮೆ ಮನಸ್ಸಿನ ಮೂಲಕ ಹಾದು ಹೋಯಿತು. ಕೋಗಿಲೆಯ ಕೂಗಾಟವೂ ಮರಣದ ವಾರ್ತೆಯನ್ನು ಮುಟ್ಟಿಸುತ್ತದೋ ಎಂಬ ನಡುಕ ಮನದಲ್ಲಿ ಆವರಿಸಿದರೆ, ಗೆಲ್ಲಿನಿಂದ ಗೆಲ್ಲಿಗೆ ಹಾರುವ ಕುಪುಲು ಎದುರು ಕಂಡಾಗ ಏನು ಗೆಲುವಿನ ಸುದ್ದಿ ತರುತ್ತದೇ ಎಂದು ಸಂತೋಷ ಪಟ್ಟದ್ದೂ ಇದೆ. ಗೂಬೆಗಳ ಕೂಗು ವಿಪತ್ತನ್ನು ತರುತ್ತದೆ ಎಂಬ ಪೊಳ್ಳು ನಂಬಿದರೆ, ಗುಬ್ಬಚ್ಚಿ ಗೂಡು ಕಟ್ಟಿದರೆ ಶುಭ ಸೂಚನೆ ಎಂದು ನಂಬಿದವರು ನಾವು. ಆದರೆ ಅವು ನಮ್ಮ ನಂಬಿಕೆಗಳಷ್ಟೇ ಅಲ್ಲದೇ ಪಕ್ಷಿಗಳಿಂದ ಎಂದೂ ನಮಗೆ ಉದ್ದೇಶಪೂರ್ವಕವಾಗಿ ತೊಂದರೆ ಆಗುವುದಿಲ್ಲ. ಹಾಗಾಗಿ ಮನುಷ್ಯರು ಬಹಳ ಹಿಂದಿನಿಂದಲೂ ಪಕ್ಷಿಗಳ ನಡುವೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.


ಹೌದು ಪಕ್ಷಿಗಳ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು, ಒಂದು ಸಣ್ಣ ಪರಿಸರದಲ್ಲೇ ಕೇವಲ 2 ಗಂಟೆಗಳಲ್ಲಿ 27 ವಿಧಗಳ ಪಕ್ಷಿಗಳು ವಾಸ ಮಾಡಿರುವುದನ್ನು ಗುರುತಿಸಿದೆ ಎಂದರೆ ಸರಿಯಾಗಿ ವೀಕ್ಷಿಸಿದರೆ ಇನ್ನೆಷ್ಟು ಹಕ್ಕಿಗಳು ಇವೆಯೋ? ಪರಿಸರವನ್ನು ಅದರಷ್ಟಕ್ಕೇ ಇರುವಂತೆ ಬೆಳೆಸಿದ ಊರಿನ ಜನರ ಬಗ್ಗೆ ಹೆಮ್ಮೆ ಪಡಬೇಕು. ಪಕ್ಷಿಗಳ ವಾಸಕ್ಕೆ ಪರಿಸರ ಹಾಗೂ ಬುದ್ಧಿವಂತ ಮನುಷ್ಯರು ತೊಂದರೆ ಕೊಡದಿದ್ದಾಗ ಪ್ರಾಣಿ ಪಕ್ಷಿಗಳೂ ಸಹಜವಾಗಿ ವಾಸ ಮಾಡಲು ಅನುಕೂಲವಾಗುತ್ತದೆ. ಕ್ಯಾಮರಾ ಕಣ್ಣಿಗೆ ಬಿದ್ದ ಪಕ್ಷಿಗಳ ಪಟ್ಟಿ ಮಾಡುವುದಾದರೆ ನವಿಲು, ಮರಕುಟಿಕ, ಪಾರಿವಾಳ, ಪಾಮ್‌ ಸ್ವಿಫ್ಟ್‌, ಕೆಂಪು ಮೂತಿಯ ಟಿಟ್ಟಿರಿ ಪಕ್ಷಿ, ಗ್ರೀನ್‌ ಸಾಂಡ್‌ಪೈಪರ್‌, ನೀರು ಕಾಗೆ, ಕೆನ್ನೀಲಿ ಬಕ, ದೊಡ್ಡ ಬೆಳ್ಳಕ್ಕಿ, ಕೊಕ್ಕರೆ, ಗರುಡ, ವೈಟ್‌ ತ್ರೋಟೆಡ್‌ ಕಿಂಗ್‌ಫಿಷರ್‌, ಕಾಮನ್‌ ಕಿಂಗ್‌ಫಿಷರ್‌, ಏಷ್ಯನ್‌ ಗ್ರೀನ್‌ ಬೀ ಈಟರ್‌, ಬ್ಲೂ ಟೈಲ್‌ಡ್‌ ಬೀಟರ್‌, ಪ್ಲಮ್‌ ಹೆಡ್ಡೆಡ್‌ ಪಾರಾಕೀಟ್‌, ಕಾಮನ್‌ ಅಯೋರಾ(ಸಣ್ಣ ಹಳದಿ ಹಕ್ಕಿ), ಬ್ಲಾಕ್‌ ಹೂಡೆಡ್‌ ಒರಿಯಲ್‌, ಬ್ಲಾಕ್‌ ಡ್ರೋಂಗೋ, ಬ್ಲಾಕ್‌ ನ್ಯಾಪ್‌ಡ್‌ ಮೊನಾರ್ಕ್‌, ರೆಡ್‌ ವಿಸ್ಕರ್ಡ್‌ ಬುಲ್‌ಬುಲ್‌, ಗ್ರೀನ್‌ ವಾರ್‌ಬ್ಲರ್‌, ಕಾಮನ್‌ ಟೈಲರ್‌ಬರ್ಡ್‌, ಜಂಗಲ್‌ ಬ್ಯಾಬ್ಲರ್‌, ಮೈನಾ, ಓರಿಯಂಟಲ್‌ ಮ್ಯಾಗ್‌ಪೈ ರೋಬಿನ್ ಹೀಗೆ ಸುಮಾರು 27 ಜಾತಿಯ ಹಕ್ಕಿಗಳು ಆ ಪರಿಸರದಲ್ಲಿ ವಾಸ ಮಾಡುತ್ತಿವೆ ಎಂದು ಪ್ರಕೃತಿಯ ವೈವಿದ್ಯತೆಗೆ ಆಚ್ಚರಿಯಾಯಿತು. ಸಾಮಾನ್ಯವಾಗಿ ಗಮನಿಸುವುದೂ ಹಾಗೂ ಅಧ್ಯಯನದ ದೃಷ್ಟಿಯಿಂದ ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ. ವಿಧವಿಧವಾದ ಅವುಗಳ ಕೂಗು, ಬಣ್ಣ, ಗಾತ್ರ, ಆಹಾರ ಪದ್ಧತಿ, ಗೂಡು ಕಟ್ಟುವ ಚಾಕಚಕ್ಯತೆ, ವಾಸಿಸುವ ಸ್ಥಳ, ಪರಿಸರ, ಅವುಗಳ ವೈವಿದ್ಯಮಯವಾದ ಹೆಸರು ಹಾಗೂ ಪರಿಸರಕ್ಕೆ ಮತ್ತು ಪರಿಸರದಿಂದ ಅವುಗಳಿಂದಾಗುವ ಪ್ರಯೋಜನ-ಹಾನಿ ಇವೆಲ್ಲ ಎಷ್ಟು ಅಸಕ್ತಿಯ ವಿಷಯಗಳಾಗಿವೆ ಎಂದು ಮನಸ್ಸಿನಲ್ಲೇ ಅಂದುಕೊಂಡೆವು.
ಪಕ್ಷಿಗಳ ಅಧ್ಯಯನಕ್ಕಾಗಿ ನಾವು ಬೈನಾಕ್ಯುಲರ್‌ ಮೂಲಕ ವೀಕ್ಷಣೆ ಮಾಡಬಹುದು. ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಆ ಪಕ್ಷಿಗಳ ಕೂಗನ್ನು ರೆಕಾರ್ಡ್‌ ಮಾಡಿದರೆ ಅದು ಯಾವ ಜಾತಿಗೆ ಸೇರಿದ ಹಕ್ಕಿ, ಹೆಸರು ಹಾಗೂ ವಿವರಗಳ ಬಗ್ಗೆ ನಮ್ಮ ಮೊಬೈಲ್‌ನಲ್ಲಿಯೇ ನೋಡಬಹುದು. ಅವುಗಳ ಹೆಸರು ಹಾಗೂ ವೈಜ್ಞಾನಿಕ ಹೆಸರುಗಳ ವಿವರಗಳು ಲಭ್ಯವಿದ್ದು ಅಧ್ಯಯನ ಮಾಡಬಹುದು. ನಾವು ಕಂಡ ಪಕ್ಷಿಗಳಲ್ಲಿ ಹೆಚ್ಚಿನವು ಸ್ಥಳೀಯ ಹಕ್ಕಿಗಳಾದರೆ, ಇನ್ನು ಕೆಲವು ಹಕ್ಕಿಗಳು ಸಂತಾನೋತ್ಪತ್ತಿಗೋ ಅಥವಾ ಬದುಕಿನ ಅನುಕೂಲತೆಗೋ ವಲಸೆ ಬಂದದ್ದು ಇರಬಹುದು. ಸ್ಥಳೀಯವಾಗಿ ಅವುಗಳನ್ನು ತಮ್ಮದೇ ಭಾಷೆಯಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಸಾಮಾನ್ಯವಾಗಿ ತುಳುನಾಡಿನಲ್ಲಿ ಹಲವು ಪಕ್ಷಿಗಳಿದ್ದು ಅವುಗಳನ್ನು ತುಳುಭಾಷೆಯಲ್ಲಿ ಮರಕುಡಪ್ಪೆ, ದೇರಕ್ಕಿ, ಕುಪುಲು, ಗುಮ್ಮೆ, ರಾಂಪಗಿಳಿ, ಕೊಂರ್ಗು, ಕಕ್ಕೆ, ಪುದ, ಮೈರೆ, ಗಿಡಿ, ಪುಂಡದೆ ಹೀಗೆ ಅನೇಕ ಸ್ಥಳೀಯ ಹಕ್ಕಿಗಳು ವಾಸವಾಗಿದ್ದು ಬಹಳ ಹಿಂದಿನಿಂದಲೂ ಮಾನವ ಬದುಕಿನೊಂದಿಗೆ ಬೆರೆತುಕೊಂಡು ಅವುಗಳು ಅಜ್ಜಿಕತೆ, ಕಬಿತೆಗಳ ವಸ್ತುವಾಗಿಯೂ ಸ್ಥಳೀಯ ಕತೆ-ಹಾಡಿನಲ್ಲಿ ಸ್ಥಾನ ಪಡೆದಿವೆ. ನಮ್ಮ ಆಚರಣೆಯಲ್ಲಿಯೂ ನಾವು ಪಕ್ಷಿಗಳನ್ನು ಆರಾಧಿಸಿಕೊಂಡು ಬಂದವರು. ಹತ್ತಿರದಲ್ಲೇ ಚಂದ್ರನಾಥ ಬಸದಿ ಇದ್ದು ಅಲ್ಲಿ ಯಕ್ಷಿಣಿಯಾದ ಪದ್ಮಾವತಿ ದೇವಿಯು ಆರಾಧನೆಗೊಳ್ಳುತ್ತಿದ್ದು, ಅವರ ವಾಹನ ಕುಕ್ಕುಟವಾಗಿದೆ. ಮುಂದೆ ನಡೆದರೆ ಮಾರಿಯಮ್ಮನ ಗುಡಿಯಲ್ಲಿ ದೇವಿಯು ಹುಲಿಯ ಮೇಲೆ ಆಸೀನರಾಗಿ ಆರಾಧನೆಗೊಳ್ಳುತ್ತಿದ್ದಾರೆ. ನಮ್ಮ ಆರಾಧನೆ, ಆಚರಣೆಗಳು ಯಾವಾಗಲೂ ಪರಿಸರವನ್ನು ರಕ್ಷಿಸುವಂತಿರಬೇಕು. ಇಂತಹ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಹಾಗಾದರೆ ಪಕ್ಷಿಗಳ ರಕ್ಷಣೆಗಾಗಿ ನಾವು ಜನಸಾಮಾನ್ಯರು ಏನು ಮಾಡಬಹುದು?
ಪರಿಸರವನ್ನು ಸ್ವಚ್ಛವಾಗಿ ಇಟ್ಟಲ್ಲಿ ಪರಿಸರದಲ್ಲಿ ಪ್ರಾಣಿ ಪಕ್ಷಿಗಳು ವಾಸಮಾಡಬಹುದು.
ನಮ್ಮ ಸುತ್ತ ಮುತ್ತಲೂ ಇದ್ದ ಕಾಡುಗಳನ್ನು ರಕ್ಷಿಸಬೇಕು. ಹೆಚ್ಚು ಹೆಚ್ಚು ಮರ, ಗಿಡಗಳನ್ನು ನೆಡಬೇಕು.
ಪ್ಲಾಸ್ಟಿಕ್‌, ರಾಸಾಯನಿಕ ವಸ್ತುಗಳ ಬಳಕೆ ಅಗತ್ಯವಿದ್ದಲ್ಲಿ ಮಾತ್ರ ಬಳಕೆ ಮಾಡಿ ಆದಷ್ಟು ಕಡಿಮೆ ಮಾಡಬೇಕು.
ಮಕ್ಕಳಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿ, ಬಿಡುವಿನ ವೇಳೆಯಲ್ಲಿ ಅವುಗಳ ವೀಕ್ಷಣೆಗೆ ಕರೆದುಕೊಂಡು ಹೋಗಬೇಕು. ಶಿಕ್ಷಣದಲ್ಲಿ ಪರಿಸರ ರಕ್ಷಣೆಯ ಬಗ್ಗೆ ಇನ್ನೂ ಹೆಚ್ಚು ವಿಚಾರಗಳನ್ನು ಅಳವಡಿಸಬೇಕು.
ವಾತಾವರಣದ ವೈಪರೀತ್ಯದಿಂದ ಕೆಲವೊಮ್ಮೆ ಪಕ್ಷಿಗಳಿಗೆ ಆಹಾರ, ನೀರು ಸಿಗದಂತಾಗುತ್ತದೆ. ಆ ಸಂದರ್ಭದಲ್ಲಿ ಅವುಗಳಿಗೆ ನೀರು, ಆಹಾರ ಒದಗಿಸುವ ವ್ಯವಸ್ಥೆಯನ್ನು ಮಾಡಬೇಕು.
ಸಾರ್ವಜನಿಕವಾಗಿ ಪಕ್ಷಿಗಳು ಜೀವಿಸುವ ಸ್ಥಳಗಳಲ್ಲಿ ಅವುಗಳಿಗೆ ತೊಂದರೆಯಾಗದಂತೆ ಪಕ್ಷಿ ವೀಕ್ಷಣಾ ಸ್ಥಳಗಳನ್ನಾಗಿಸಿ ಅಭಿವೃದ್ಧಿ ಪಡಿಸಿ ಅದರ ಸೊಬಗನ್ನು ಸವಿಯಲಷ್ಟೇ ಅವಕಾಶ ಕಲ್ಪಿಸುವುದು.
ರಾಜಕೀಯ ಕಾರಣದಿಂದಲೋ, ಧರ್ಮದ ಅಂಧತೆಯಿಂದಲೋ ನಾವು ಜನಸಂಖ್ಯೆಯನ್ನು ಬೇಕಾಬಿಟ್ಟಿ ಹೆಚ್ಚಿಸುತ್ತಾ ಇದ್ದು, ಅದು ಪ್ರಸ್ತುತ ಕಾಲದಲ್ಲಿ ಜಲ, ವಾಯು, ನೀರು ಹೀಗೆ ಸರ್ವ ಪರಿಸರವನ್ನು ವಿಷದ ಕೂಪಕ್ಕೆ ತಳ್ಳಿ, ಮನುಷ್ಯ ಮಾತ್ರವಲ್ಲದೇ ಇಡೀ ಜೀವ ಸಂಕುಲವನ್ನು ಸರ್ವನಾಶ ಮಾಡುವ ಹಂತದಲ್ಲಿದ್ದೇವೆ. ಜನಸಂಖ್ಯೆ ಕಾನೂನಾತ್ಮಕವಾಗಿ ನಿಯಂತ್ರಣಕ್ಕೆ ಬಂದು, ಧರ್ಮವನ್ನು ನಮ್ಮ ಮನೆಯ ಆಚರಣೆಯಲ್ಲಿ ಮಾತ್ರ ಸೀಮಿತವಾಗಿಸಿಕೊಂಡು ಬದಲಾಗಲೇಬೇಕು. ಜೀವಿಗಳ ಪ್ರಪಂಚದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಶಿಕ್ಷಿತ, ಸುರಕ್ಷಿತ ಸಮಾಜವನ್ನು ಅತಿ ಅಗತ್ಯವಾಗಿ ನಿರ್ಮಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಬಿಡಿ ನಮ್ಮ ಕಣ್ಣ ಮುಂದೆಯೇ ಹಲವು ಜೀವರಾಶಿಗಳು ಭೂಮಿಯಲ್ಲಿ ಜೀವಿಸುವ ಹಕ್ಕನ್ನು ಕಳೆದುಕೊಂಡು ಇದ್ದವರು ರೋಗಿಗಳಾಗುವುದರಲ್ಲಿ ಸಂಶಯವಿಲ್ಲ.
ಇಂದು ನಿಧಾನವಾಗಿ ಸಹಜ ಪ್ರಕೃತಿಯು ಯಾಂತ್ರೀಕೃತ ಬದುಕಿನ ಅವಶ್ಯಕತೆಗಳಿಗನುಗುಣವಾಗಿ ಕೃತಕ ವಾತಾವರಣಗಳು ಸೃಷ್ಟಿಯಾಗುತ್ತಾ ಬದಲಾಗುತ್ತಿದೆ. ಮೂಲ ಪ್ರಕೃತಿಯ ಸೊಬಗು ಕಣ್ಮರೆಯಾಗುತ್ತಿದೆ. ರಿಂಗಾಯಣದ ರಂಗಮಂಟಪದಲ್ಲೇ ವಿಶೇಷ ಮತಿಯುಳ್ಳ ಮಾನವರು ಕೃತಕ ಬುದ್ಧಿಮತ್ತೆಯ ಮೂಲಕ ನಿಸರ್ಗದ ನೈಜತೆಯು ನಾಚುವಂತೆ ಕೃತಕತೆಯನ್ನು ನೈಜತೆಯನ್ನಾಗಿಸಿ ಆ ಅನುಭವವನ್ನು ಮನುಷ್ಯಕಣ್ಣಿಗಷ್ಟೇ ಸೀಮಿತಗೊಳಿಸಿ ಕ್ಷಣಿಕ ಸುಖ ಅನುಭವಿಸುವಂತೆ ಮಾಡುತ್ತಿದ್ದಾನೆ ಎಂದು ಕೆಲವೊಮ್ಮೆ ಅನ್ನಿಸುತ್ತಿದೆ. ಅದು ಒಳ್ಳೆಯದೇ ಆದರೆ ಹಾಗಾಗಬಾರದು. ನೈಜ ಸುಂದರ ಪ್ರಕೃತಿಯನ್ನು ಅನುಭವಿಸಿ, ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಅಂದರೆ ಪ್ರಕೃತಿಯ ಸೊಬಗನ್ನು ಹಾಳು ಗೆಡವದೆ ಪರ್ಯಾವರಣವು ಶುದ್ಧವಾಗಿರುವಂತೆ ಕಾಪಾಡಬೇಕು. “ಪರಸ್ಪರೋಪಗ್ರಹೋ ಜೀವಾನಾಂ” ಎಂಬ ಉಕ್ತಿಯಂತೆ ಎಲ್ಲಾ ಜೀವಿಗಳು ಪರಸ್ಪರ ಸಹಾಯ ಮಾಡಿಕೊಳ್ಳುತ್ತಾ ಬದುಕಬೇಕು” ಪ್ರತಿ ಜೀವಿಯೂ ಇನ್ನೊಂದು ಜೀವಿಯ ಮೇಲೆ ಅವಲಂಬಿತವಾಗಿರುತ್ತದೆ, ಪ್ರಕೃತಿ, ಪ್ರಾಣಿ, ಪಕ್ಷಿ, ಮನುಷ್ಯ ಎಲ್ಲರೂ ಒಂದೇ ಸರಪಣಿಯ ಕೊಂಡಿಗಳಾಗಿದ್ದು, ಒಬ್ಬರಿಗೊಬ್ಬರು ಅರಿತು ಬಾಳುವುದು ಜೀವನದ ನಿಜವಾದ ನಿಯಮ.
ಸುಮಾರು ಎರಡು ಗಂಟೆಗಳಲ್ಲಿ 27 ವಿವಿಧ ಜಾತಿಯ ಪಕ್ಷಿಗಳನ್ನು ಕಂಡು, ಪ್ರಕೃತಿಯ ವಿಸ್ಮಯವನ್ನು ಕೇಳಿ ಆಶ್ಚರ್ಯವಾಯಿತು. ನಮ್ಮ ಸುತ್ತಮುತ್ತಲು ಎಷ್ಟೊಂದು ಪಕ್ಷಿಗಳ ವಾಸವಿದೆ ಎಂದು ಕೇಳಿ ಮನಸ್ಸಿಗೆ ಸಂತೋಷವಾಯಿತು. ಸ್ವತಃ ತಾವೇ ಅನೇಕ ನಿಯಮಗಳನ್ನು ಪಾಲಿಸುವುದಾಗಿ ನಿರ್ಣಯಿಸಿ, ಇತರರಿಗೆ ಬರಹದ ಮೂಲಕ ತಿಳಿ ಹೇಳುವ ಜಾಗೃತಿಯ ಕೆಲಸವನ್ನು ಮಾಡಬೇಕು ಎಂದು ನಿರ್ಣಯಿಸಿದೆವು. ಸಂಜೆಯಾಗುತ್ತಿದ್ದಂತೆ ಆಧುನಿಕ ವಿಮಾನ ನಿರ್ಮಾಣಗಳಿಗೆ ಪ್ರೇರಣೆಯಾದ ಹಕ್ಕಿಗಳು ಗರಿ ಬಿಚ್ಚಿ ಸಾಲು ಸಾಲಾಗಿ ಗಗನದಲ್ಲಿ ಹಾರುವುದನ್ನು ವೀಕ್ಷಿಸಿದಾಗ ನಾವು ಒಮ್ಮೆ ನೀಲಾಗಸದ ಪಕ್ಷಿ ಪ್ರಪಂಚದಲ್ಲಿ ಹಾರಿ ಬಿಡಬೇಕು ಎಂದೆನಿಸಿತು. ಯಾವ ಜಂಜಾಟವಿಲ್ಲದೆ ಹಕ್ಕಿಯಂತೆ ಹಾರಿ ಹಗುರವಾಗಬೇಕೆಂದೆನಿಸಿತು.

ಶ್ರೀಮತಿ ಗೀತಾ ಪಾಂಡೇಶ್ವರ
G-೦೧, ವೆಸ್ಟ್‌ಗೇಟ್‌ ಟೆರೆಸಸ್‌
ಪಾಂಡೇಶ್ವರ, ಮಂಗಳೂರು – 575001
ಮೊಬೈಲ್‌ ಸಂಖ್ಯೆ: 9449924481

SHARE
Loading spinner

Leave a Reply

Your email address will not be published. Required fields are marked *

error: Content is protected !!