
ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್ನಲ್ಲಿ ನಿರ್ಮಿಸಲಾಗಿರುವ ಕಾಂಪ್ಲೆಕ್ಸ್ನ ಮಳಿಗೆಗಳನ್ನು ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 24.10ರಷ್ಟು ಮೀಸಲಿಟ್ಟು ಹಂಚಿಕೆ ಮಾಡಬೇಕು ಎಂದು ಬಿಎಸ್ಪಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಆಗ್ರಹಿಸಿದ್ದಾರೆ.

ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡವರು ಆರ್ಥಿಕವಾಗಿ ಸಬಲರಾಗಲು ಕಾಂಪ್ಲೆಕ್ಸ್ನಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಾಂಪ್ಲೆಕ್ಸ್ ಉದ್ಘಾಟನೆಯ ಬಳಿಕ ಅರ್ಹರಿಗೆ ಮಳಿಗೆಗಳನ್ನು ಹಂಚಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ದಲಿತರು, ಮುಂಡಾಲ ಹಾಗೂ ಕೊರಗ ಸಮುದಾಯದವರ ಅಭಿವೃದ್ಧಿಗೆ ಕುದ್ಮಲ್ ರಂಗರಾವ್ ಮಹತ್ವದ ಕೊಡುಗೆ ನೀಡಿದ್ದಾರೆ. ಮಂಗಳೂರಿನ ಬಾಬುಗುಡ್ಡೆಯಲ್ಲಿರುವ ಅವರ ಸ್ಮಾರಕ ಮಳೆನೀರಿನಿಂದ ಹಾನಿಗೊಳಗಾಗಿದ್ದು, ಕೂಡಲೇ ದುರಸ್ತಿಪಡಿಸಿ ಸುಣ್ಣಬಣ್ಣ ಬಳಿದು ಉತ್ತಮವಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಆಡಳಿತಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಬೆಹೆಂಜಿ ಮಾಯಾವತಿ ಅವರ ಜನ್ಮದಿನವಾದ ಜನವರಿ 15ರಂದು ರಾಜ್ಯಾದ್ಯಂತ ಜನಕಲ್ಯಾಣ ದಿನವಾಗಿ ಆಚರಿಸಲಾಗುವುದು. ಪಕ್ಷವು ಬಂಡವಾಳಶಾಹಿಗಳಿಂದ ಹಣ ಪಡೆಯದೆ ಸ್ವಂತ ಶಕ್ತಿಯಿಂದ ರಾಜಕೀಯವಾಗಿ ಮುನ್ನಡೆಯುವ ಉದ್ದೇಶ ಹೊಂದಿದೆ. ಜಿಲ್ಲೆಯ ಬಡವರು ಮನೆಮನೆಗೆ ತೆರಳಿ ‘ಒಂದು ನೋಟು, ಒಂದು ವೋಟು’ ಅಭಿಯಾನದ ಮೂಲಕ ಪಕ್ಷವನ್ನು ಬೆಂಬಲಿಸಬೇಕು. ದಲಿತರು, ಶೋಷಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಒಗ್ಗೂಡಿ ರಾಜಕೀಯ ಅಧಿಕಾರ ಪಡೆಯಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

