ಮಂಗಳೂರು: ಕಾಂಗ್ರೆಸ್ ಸರ್ಕಾರ ದಲಿತರಿಗೆ ಭೂಮಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ, ಮೂರು ವರ್ಷ ಕಳೆದರೂ ಡಿ.ಸಿ. ಮನ್ನಾ ಭೂಮಿಯನ್ನು ಹಂಚಿಕೆ ಮಾಡಿಲ್ಲ. ಭೂಹೀನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ಭೂಮಿಯನ್ನು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು ಎಂದು ಬಿಎಸ್ಪಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಆಗ್ರಹಿಸಿದರು.

ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 852 ಎಕರೆ ಡಿ.ಸಿ. ಮಣ್ಣಿನ ಭೂಮಿ ಇದ್ದು, ಅದರಲ್ಲಿ 229 ಎಕರೆ ಭೂಮಿ ಹಂಚಿಕೆಗೆ ಲಭ್ಯವಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಭೂಮಿಯನ್ನು ಮೊದಲ ಹಂತದಲ್ಲಿ ಭೂಹೀನ ದಲಿತರಿಗೆ ತಕ್ಷಣ ಹಂಚಿಕೆ ಮಾಡಬೇಕು ಎಂದರು.

ಗೇರು ಅಭಿವೃದ್ಧಿ ನಿಗಮ ಮತ್ತು ಅರಣ್ಯ ಇಲಾಖೆಯ ವಶದಲ್ಲಿರುವ ಹಾಗೂ ಇತರರು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಸರ್ವೆ ನಡೆಸಿ, ಕಾನೂನು ಪ್ರಕಾರ ಸರ್ಕಾರದ ವಶಕ್ಕೆ ಪಡೆದು ಅರ್ಹ ಭೂಹೀನರಿಗೆ ಹಂಚಿಕೆ ಮಾಡಬೇಕು. ಭೂಮಿ ಹಂಚಿಕೆಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಸರ್ಕಾರ ವಿಶೇಷ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಬಡವರು, ದಲಿತರು ಮತ್ತು ಭೂಹೀನ ಸಮುದಾಯಗಳ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ಡಿ.ಸಿ. ಮನ್ನಾ ಭೂಮಿ ಹಂಚಿಕೆ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಹುಜನ ಸಮಾಜ ಪಾರ್ಟಿಯನ್ನು ಮಾನ್ಯವರ್ ಕಾನ್ಸಿರಾಮ್ ಸ್ಥಾಪಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯಾಗಿ ಮಾಯಾವತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು..


