ಅಕ್ಟೋಬರ್ 18ರಂದು ಕುಡ್ಲದ ಪಿಲಿಪರ್ಬ: ಹುಲಿವೇಷ ತಂಡಗಳ ನಡುವೆ ರೋಚಕ ಸ್ಪರ್ಧೆ

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿರುವ ಕುಡ್ಲದ ಪಿಲಿಪರ್ಬದ ಐದನೇ ಆವೃತ್ತಿ ಅಕ್ಟೋಬರ್ 18ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಬೆಳಗ್ಗೆ 10 ಗಂಟೆಯಿಂದ ಹುಲಿವೇಷ ಸ್ಪರ್ಧಾಕೂಟ ಆರಂಭವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ನಗರದ ಓಷನ್ ಪರ್ಲ್ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಜನಪ್ರಿಯ ಹುಲಿವೇಷ ತಂಡಗಳ ಪೈಕಿ 11 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದರು.

ಪ್ರತಿ ತಂಡವೂ ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಪ್ರವೇಶಿಸಿ 20 ನಿಮಿಷಗಳ ಕಾಲ ಪ್ರದರ್ಶನ ನೀಡಲಿದೆ. ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿಗಳು, ಮರಿಹುಲಿಗಳು, ಹಿಮ್ಮೇಳ ಹಾಗೂ ಧರಣಿ ಮಂಡಲದಂತಹ ವೈವಿಧ್ಯಮಯ ಪ್ರದರ್ಶನಗಳು ಪಿಲಿಪರ್ಬದ ಆಕರ್ಷಣೆಯಾಗಲಿವೆ.

ಪಾರದರ್ಶಕ ತೀರ್ಪು, ಆಕರ್ಷಕ ಬಹುಮಾನ

ಸ್ಪರ್ಧೆಯ ತೀರ್ಪುಗಾರರಾಗಿ ಆರು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ನಾಲ್ವರು ವೇದಿಕೆಯಲ್ಲಿ ಪ್ರದರ್ಶನವನ್ನು ವೀಕ್ಷಿಸಿದರೆ, ಇನ್ನಿಬ್ಬರು ವಿಡಿಯೋ ದೃಶ್ಯಗಳನ್ನು ಪರಿಶೀಲಿಸುವ ಮೂಲಕ ಥರ್ಡ್ ಅಂಪೈರ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತಂಡಗಳು ವೇದಿಕೆಗೆ ಆಗಮಿಸುವುದರಿಂದ ಹಿಡಿದು ಪ್ರದರ್ಶನ ಮುಗಿಸಿ ನಿರ್ಗಮಿಸುವವರೆಗಿನ ಎಲ್ಲ ಚಟುವಟಿಕೆಗಳನ್ನು ವಿಡಿಯೋದಲ್ಲಿ ದಾಖಲಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮರುಪ್ರಸಾರ ವೀಕ್ಷಿಸಿ ಫಲಿತಾಂಶ ಪ್ರಕಟಿಸಲಾಗುವುದು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರಲಿದೆ.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹5 ಲಕ್ಷ, ದ್ವಿತೀಯ ಬಹುಮಾನವಾಗಿ ₹3 ಲಕ್ಷ ಹಾಗೂ ತೃತೀಯ ಬಹುಮಾನವಾಗಿ ₹2 ಲಕ್ಷ ನಗದು ಮತ್ತು ಸ್ಮರಣಿಕೆ ನೀಡಲಾಗುವುದು. ವೈಯಕ್ತಿಕ ವಿಭಾಗಗಳಲ್ಲಿಯೂ ನಗದು ಬಹುಮಾನಗಳಿರಲಿದ್ದು, ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ತಲಾ ₹50 ಸಾವಿರ ಗೌರವಧನ ನೀಡಲಾಗುವುದು.

ಇದರೊಂದಿಗೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ ಹಾಗೂ ಧರಣಿ ಮಂಡಲ ವಿಭಾಗಗಳಲ್ಲಿಯೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದು.

ಐದು ಸಾವಿರ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ

ಕಾರ್ಯಕ್ರಮ ವೀಕ್ಷಿಸಲು ಕೇಂದ್ರ ಮೈದಾನದಲ್ಲಿ ಸುಮಾರು ಐದು ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದೆ. ಮೈದಾನದಲ್ಲಿ ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗೆ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗಿ ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ಭಾಗವಹಿಸುವ ಹುಲಿವೇಷ ತಂಡಗಳು

ಹನುಮಾನ್ ಟೈಗರ್ಸ್ ಉಪ್ಪಳ, ಪಾಂಡೇಶ್ವರ ಶಾರದಾ ಹುಲಿ, ಶಿವಶಕ್ತಿ ಟೈಗರ್ಸ್ ಕುಂಜತ್ತೂರು ಮಂಜೇಶ್ವರ, ಕೊಡಿಯಾಲ್ ಬೈಲ್ ಫ್ರೆಂಡ್ಸ್ ಲೆಜೆಂಡ್ ಟೈಗರ್ಸ್, ಪೊಳಲಿ ದ ಕಿಂಗ್ ಟೈಗರ್ಸ್ ರಾಜ್ ಫ್ರೆಂಡ್ಸ್, ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ, ಟ್ಯಾಲೆಂಟ್ ಟೈಗರ್ಸ್ ಎಂವೈಬಿ ಕಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು, ಫ್ರೆಂಡ್ಸ್ ಅಂಗಾರಗುಡ್ಡೆ ಟೈಗರ್ಸ್ ಮುಲ್ಕಿ, ಪುರಲ್ಲ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ ಹಾಗೂ ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಜಿಲ್ಲೆ ಹಾಗೂ ರಾಜ್ಯದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಗಣ್ಯರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ಯತೀಶ್ ಬೈಕಂಪಾಡಿ, ಲಲಿತ್ ಮೆಂಡನ್, ನವನೀತ್ ಶೆಟ್ಟಿ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!