ಮಂಗಳೂರಿನಲ್ಲಿ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ, ಪೂರೈಕೆ ವ್ಯತ್ಯಯ: ಸಮಗ್ರ ತನಿಖೆಗೆ ನಡೆಸಿ – ಜಮಾಲ್ ಜೋಕಟ್ಟೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಪ್ಪು ಕಲ್ಲು, ಎಂ-ಸ್ಯಾಂಡ್, ಜಲ್ಲಿ ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಬೆಲೆ ಪದೇಪದೇ ಏರಿಕೆಯಾಗುತ್ತಿರುವುದು ಹಾಗೂ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಕುರಿತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಆಗ್ರಹಿಸಿದ್ದಾರೆ.

ಮಂಗಳೂರಿನ ಮಾರುಕಟ್ಟೆಯಲ್ಲಿ ನಿರ್ಮಾಣ ಸಾಮಗ್ರಿಗಳು ದುಬಾರಿಯಾಗುತ್ತಿರುವಾಗ, ಇದೇ ಸಾಮಗ್ರಿಗಳನ್ನು ಕೇರಳಕ್ಕೆ ಕಡಿಮೆ ದರದಲ್ಲಿ ಪೂರೈಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ದರ ವ್ಯತ್ಯಾಸಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಸಂಬಂಧಪಟ್ಟ ಇಲಾಖೆಗಳು ದಾಖಲೆಗಳ ಆಧಾರದಲ್ಲಿ ಪರಿಶೀಲಿಸಬೇಕು. ಸಾರಿಗೆ ವೆಚ್ಚ, ಪೂರೈಕೆ ಪ್ರಮಾಣ, ವ್ಯಾಪಾರ ಒಪ್ಪಂದಗಳು ಹಾಗೂ ಇತರ ವಾಣಿಜ್ಯ ಅಂಶಗಳಿಂದ ದರ ವ್ಯತ್ಯಾಸ ಉಂಟಾಗಿದೆಯೇ ಅಥವಾ ಮಾರುಕಟ್ಟೆಯ ಸ್ಪರ್ಧೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರುವ ಅನ್ಯಾಯದ ಪದ್ಧತಿಗಳು ನಡೆಯುತ್ತಿವೆಯೇ ಎಂಬುದನ್ನು ತನಿಖೆಯ ಮೂಲಕ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಮತ್ತು ಅನಿಯಮಿತ ಪೂರೈಕೆಯಿಂದ ಮನೆ ನಿರ್ಮಿಸುವ ಸಾಮಾನ್ಯ ಜನರು, ಬಿಲ್ಡರ್‌ಗಳು, ಗುತ್ತಿಗೆದಾರರು ಹಾಗೂ ನಿರ್ಮಾಣ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕಾಮಗಾರಿಗಳ ವೆಚ್ಚ ಹೆಚ್ಚಳ ಮತ್ತು ವಿಳಂಬವು ಕಾರ್ಮಿಕರ ಉದ್ಯೋಗಾವಕಾಶ ಹಾಗೂ ಅವರ ಕುಟುಂಬಗಳ ಜೀವನೋಪಾಯದ ಮೇಲೂ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಜಮಾಲ್ ಜೋಕಟ್ಟೆ ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಮಾರುಕಟ್ಟೆ ಹಾಗೂ ಕೇರಳಕ್ಕೆ ಸಾಗಿಸುವ ನಿರ್ಮಾಣ ಸಾಮಗ್ರಿಗಳ ಮಾರಾಟದ ದರ, ಪೂರೈಕೆ ಪ್ರಮಾಣ, ಇನ್‌ವಾಯ್ಸ್‌ಗಳು, ಸಾಗಣೆ ದಾಖಲೆಗಳು ಮತ್ತು ವ್ಯಾಪಾರ ಒಪ್ಪಂದಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು. ಯಾವುದೇ ಅಕ್ರಮ ಅಥವಾ ಕಾನೂನು ಉಲ್ಲಂಘನೆ ನಡೆದಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಂಗಳೂರಿನ ನಿರ್ಮಾಣ ವಲಯಕ್ಕೆ ನ್ಯಾಯಸಮ್ಮತ ಬೆಲೆಯಲ್ಲಿ ನಿರ್ಮಾಣ ಸಾಮಗ್ರಿಗಳು ಸಮರ್ಪಕವಾಗಿ ಲಭ್ಯವಾಗುವಂತೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ಪಾರದರ್ಶಕ ತನಿಖೆಯ ಮೂಲಕ ಉತ್ತರ ನೀಡಬೇಕು. ಆರೋಪಗಳ ಸತ್ಯಾಸತ್ಯತೆಯನ್ನು ದಾಖಲೆಗಳ ಆಧಾರದಲ್ಲಿ ಬಹಿರಂಗಪಡಿಸಿ, ನಿರ್ಮಾಣ ಸಾಮಗ್ರಿಗಳ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ವಹಿವಾಟು ಮತ್ತು ಸಮರ್ಪಕ ಪೂರೈಕೆಯನ್ನು ಖಚಿತಪಡಿಸಬೇಕು ಎಂದು ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

SHARE
Loading spinner

One thought on “ಮಂಗಳೂರಿನಲ್ಲಿ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ, ಪೂರೈಕೆ ವ್ಯತ್ಯಯ: ಸಮಗ್ರ ತನಿಖೆಗೆ ನಡೆಸಿ – ಜಮಾಲ್ ಜೋಕಟ್ಟೆ”

Leave a Reply

Your email address will not be published. Required fields are marked *

error: Content is protected !!