ಕರಾವಳಿಯ ದ.ಕ ಕಾಸರಗೋಡು ಉಡುಪಿ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ಸಂಜೆ ಹಾಗೂ ರಾತ್ರಿ ಉತ್ತಮ ಮಳೆಯಾಗಿದೆ. ಕಾಪು ಉಡುಪಿ ಕಾರ್ಕಳ ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿದೆ. ಕೊಡಗು ಹಾಸನ ಚಿಕ್ಕಮಗಳೂರು ಚಾಮರಾಜನಗರ ರಾಮನಗರ ಮೈಸೂರು ಮಂಡ್ಯ ಬೆಂಗಳೂರು ತುಮಕೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.ಉಳಿದ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗಿದ್ದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿತ್ತು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದ್ದು ಲಕ್ಷ್ಮಿಸಾಗರದಲ್ಲಿ 158mm ಗರಿಷ್ಠ ಮಳೆಯಾಗಿತ್ತು.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿಯ ಜಿಲ್ಲೆಗಳಲ್ಲಿ ಹಗಲು ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯಾಗಬಹುದು. ದ.ಕ ಕಾಸರಗೋಡು ಉಡುಪಿ ಜಿಲ್ಲೆಗಳಲ್ಲಿ ಸಂಜೆ – ರಾತ್ರಿ ಗುಡುಗು ಮಳೆಯ ಮುನ್ಸೂಚನೆ ಇದೆ. ಉ.ಕ ಜಿಲ್ಲೆಯಲ್ಲಿಯೂ ರಾತ್ರಿ ಮಳೆಯ ಮುನ್ಸೂಚನೆ ಇದೆ. ಮುಂದಿನ 3-4 ದಿನ ಸಂಜೆ ರಾತ್ರಿ ಮಳೆ ಮುಂದುವರೆಯಬಹುದು.

ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತಿನಿಂದ ಮಳೆ ಆರಂಭ ಆಗಲಿದ್ದು ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಹಗಲು ಮೋಡದ ವಾತಾವರಣ ಇರಲಿದ್ದು ಸಂಜೆ -ರಾತ್ರಿ ಗುಡುಗು ಮಳೆ ಮುನ್ಸೂಚನೆ ಇದೆ. ಕೊಡಗು ಜಿಲ್ಲೆಯಲ್ಲಿ ಮತ್ತು ಚಾರ್ಮಾಡಿ ಕುದುರೆಮುಖ ಆಗುಂಬೆ ಸುತ್ತಮುತ್ತ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

ದಕ್ಷಿಣ ಒಳನಾಡಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಮಳೆ ಮುನ್ಸೂಚನೆ ಇದೆ. ಚಾಮರಾಜನಗರ ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಮೈಸೂರು ಮಂಡ್ಯ ಬೆಂಗಳೂರು – ಗ್ರಾಮಾಂತರ ತುಮಕೂರು ಚಿತ್ರದುರ್ಗ ದಾವಣಗೆರೆ ವಿಜಯನಗರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಅ 22 ತನಕ ಮಳೆ ಮುಂದುವರೆಯಲಿದ್ದು ತಮಿಳುನಾಡು ಸಮೀಪದ ದಕ್ಷಿಣದ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಬಹುದು.

ಉತ್ತರ ಒಳನಾಡಿನಲ್ಲಿ ಸಂಜೆ ಮೋಡ ಬರಲಿದ್ದು ಬಳ್ಳಾರಿ ಕೊಪ್ಪಳ ಹಾವೇರಿ ಗದಗ ಧಾರವಾಡ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಅ 20 ತನಕ ಉತ್ತರ ಒಳನಾಡಿನ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಅ 22 ತನಕ ಅಲ್ಲಲ್ಲಿ ಮಳೆ ಮುಂದುವರೆಯಬಹುದು.

ಅರಬ್ಬೀಸಮುದ್ರದಲ್ಲಿ ಕೇರಳ ಸಮೀಪ ಮೇಲ್ಮೈ ಸುಳಿಗಾಳಿಯ ತಿರುಗುವಿಕೆ ಇರುವ ಕಾರಣ ಮತ್ತು ತಮಿಳುನಾಡು ಕರಾವಳಿಗೆ ಸಮೀಪ ಬಂಗಾಳಕೊಲ್ಲಿಯಲ್ಲಿ ಸರ್ಕ್ಯುಲೇಷನ್ ಇರುವುದರಿಂದ ದಕ್ಷಿಣ- ಮಧ್ಯ ಕರ್ನಾಟಕದಲ್ಲಿ ಇವತ್ತು ಸಂಜೆ – ರಾತ್ರಿ ಗುಡುಗು ಮಳೆಯಾಗುವ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಮುಂದಿನ 3-4 ದಿನ ಮುಂದುವರೆಯಲಿದ್ದು ಇದರಿಂದಾಗಿ ದಕ್ಷಿಣ ಭಾರತದಲ್ಲಿ ಮಳೆ ಮುಂದುವರೆಯಬಹುದು. ಅರಬ್ಬೀಸಮುದ್ರದಲ್ಲಿ ಅ 22 ರ ಅಂದಾಜು ವಾಯುಭಾರಕುಸಿತವಾಗುವ ಸಾಧ್ಯತೆ ಇದೆ.

