ಮಂಗಳೂರು: ಸ್ಯಾಂಡಿಸ್ ಕಂಪನಿ ಅರ್ಪಿಸುವ ಮಂಗಳೂರು ಯುವ ದಸರಾ-2026 ಕಾರ್ಯಕ್ರಮವು ಸತತ ಮೂರನೇ ವರ್ಷ ಆಯೋಜನೆಗೊಳ್ಳುತ್ತಿದ್ದು, ಅ.17ರ ಶನಿವಾರ ಸಂಜೆ 6 ಗಂಟೆಗೆ ನಗರದ ಲೇಡಿಹಿಲ್ನ ಚರ್ಚ್ ಗ್ರೌಂಡ್ನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಜನಪ್ರಿಯ ಶಾಸಕ ಉಮಾನಾಥ ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ, ಸದಾನಂದ ಪೂಜಾರಿ ಹಾಗೂ ಕಿರಣ್ ಕೋಡಿಕಲ್ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ನಡೆಯಲಿದೆ. ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್ ಸೇರಿದಂತೆ ಹಲವು ಪ್ರಸಿದ್ಧ ಗಾಯಕ-ಗಾಯಕಿಯರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕರನ್ನು ಸನ್ಮಾನಿಸಲಾಗುವುದು. ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಉಚಿತ ಪ್ರವೇಶವಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ಯಾಂಡಿಸ್ ಕಂಪನಿಯ ಮಾಲಕ ಸಂದೇಶ್ ರಾಜ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


