ಮಂಗಳೂರು: ಎಸ್ಸಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಸೊರಕೆ ಚಂದ್ರಶೇಖರ್ ಅವರ 125ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಒಂದು ವರ್ಷದ ಕಾಲ ವಿವಿಧ ಶೈಕ್ಷಣಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳಿಗೆ ಒಟ್ಟು ₹90 ಲಕ್ಷ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಎಸ್ಸಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ರಜನೀಶ್ ಸೊರಕೆ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊರಕೆ ಚಂದ್ರಶೇಖರ್ ಅವರು 1902ರಲ್ಲಿ ಜನಿಸಿದ್ದು, 2027ರ ಅಕ್ಟೋಬರ್ 22ರಂದು ಅವರ 125ನೇ ಜನ್ಮ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದರ ಪೂರ್ವಭಾವಿಯಾಗಿ 2026ರ ಅಕ್ಟೋಬರ್ 22ರಿಂದಲೇ ವಿವಿಧ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಪ್ರಸ್ತುತ ಸಮೂಹದ ಏಳು ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಾದ್ಯಂತ ಸಂಸ್ಥಾಪಕರ ಸ್ಮರಣಾರ್ಥ ಹಲವು ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.
ಸೊರಕೆ ಚಂದ್ರಶೇಖರ್ ಅವರು ಗ್ರಾಮೀಣ ಹಿನ್ನೆಲೆಯಿಂದ ಮಂಗಳೂರಿಗೆ ಬಂದು 1960ರ ದಶಕದಲ್ಲಿ ಎಸ್ಸಿಎಸ್ ಮೋಟಾರ್ ಸರ್ವಿಸ್ ಆರಂಭಿಸಿದ್ದರು. ಬಳಿಕ ಎಸ್ಸಿಎಸ್ ಸೇಲ್ಸ್ ಕಾರ್ಪೊರೇಷನ್ ಸ್ಥಾಪಿಸುವುದರ ಜತೆಗೆ, ಮಂಗಳೂರಿನಲ್ಲಿ ಆಸ್ಪತ್ರೆ ಸ್ಥಾಪನೆಗೂ ಪ್ರೇರಣೆಯಾಗಿದ್ದರು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟಿ ಹೊಂದಿದ್ದ ಅವರು, ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಶಯ ಹೊಂದಿದ್ದರು. ಅವರ ಆಶಯಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮೊಮ್ಮಕ್ಕಳಾದ ನಾವು ಸಂಸ್ಥೆಯನ್ನು ವಿಸ್ತರಿಸುತ್ತಿದ್ದು, ಅವರ ಸೇವೆ ಹಾಗೂ ಸಾಧನೆಗಳನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.
ಸಂಸ್ಥೆಯ ಸಲಹೆಗಾರ ಆ್ಯಂಡೋಪೌಲ್ ಮಾತನಾಡಿ, ಸಂಸ್ಥಾಪಕರು ಶಿಕ್ಷಣ ಕ್ಷೇತ್ರದಲ್ಲಿ ಬಿತ್ತಿದ ಬೀಜ ಇಂದು ಬೃಹತ್ ಶಿಕ್ಷಣ ಸಮೂಹವಾಗಿ ಬೆಳೆದಿದೆ. ಅವರ ದೂರದೃಷ್ಟಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಒಂದು ವರ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಶಿಕ್ಷಕರಿಗೆ ಚಿನ್ನದ ಪ್ರಶಸ್ತಿ, ವಿದ್ಯಾರ್ಥಿಗಳಿಗೆ ₹90 ಲಕ್ಷ ವಿದ್ಯಾರ್ಥಿವೇತನ
ವರ್ಷಾಚರಣೆಯ ಅಂಗವಾಗಿ ಮೂರು ಪ್ರಮುಖ ಪ್ರಶಸ್ತಿ ಯೋಜನೆಗಳನ್ನು ಘೋಷಿಸಲಾಗಿದೆ. ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾಗುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯಡಿ ಇಬ್ಬರು ಶಿಕ್ಷಕರಿಗೆ 24 ಕ್ಯಾರೆಟ್ ಶುದ್ಧ ಚಿನ್ನದ ಪ್ರಶಸ್ತಿ ನೀಡಲಾಗುವುದು. ಅಲ್ಲದೆ, 10 ಶಿಕ್ಷಕರಿಗೆ ಶುದ್ಧ ಬೆಳ್ಳಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅರ್ಹ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ.
ಶಾಲಾ ವಿದ್ಯಾರ್ಥಿಗಳ ನಾಯಕತ್ವವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅತ್ಯುತ್ತಮ ಶಾಲಾ ನಾಯಕ (ಎಸ್ಪಿಎಲ್) ಪ್ರಶಸ್ತಿಯನ್ನು ಪರಿಚಯಿಸಲಾಗಿದೆ. ಈ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ₹7,000, ದ್ವಿತೀಯ ಬಹುಮಾನವಾಗಿ ₹5,000 ಹಾಗೂ ತೃತೀಯ ಬಹುಮಾನವಾಗಿ ₹3,000 ನೀಡಲಾಗುವುದು. ಇದರ ಜತೆಗೆ ಇತರ 10 ವಿದ್ಯಾರ್ಥಿಗಳನ್ನೂ ಗೌರವಿಸಲಾಗುವುದು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉತ್ತೇಜನ ನೀಡಲು ಸಂಸ್ಥಾಪಕ ಸೊರಕೆ ಚಂದ್ರಶೇಖರ್ ಅವರ ಹೆಸರಿನಲ್ಲಿ ‘ಔಟ್ಸ್ಟ್ಯಾಂಡಿಂಗ್ ಸ್ಟೂಡೆಂಟ್’ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಲಾಗುವುದು. 10ನೇ ತರಗತಿಯ ಮಧ್ಯಂತರ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಅಥವಾ 9ನೇ ತರಗತಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದು ಡಿಸ್ಟಿಂಕ್ಷನ್ ಸಾಧಿಸಿದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಡಿ ಎಸ್ಸಿಎಸ್ ಪದವಿಪೂರ್ವ ಕಾಲೇಜಿಗೆ ಪ್ರವೇಶ ಪಡೆಯುವ ಅರ್ಹ ವಿದ್ಯಾರ್ಥಿಗಳಿಗೆ ಅಂಕಗಳ ಆಧಾರದಲ್ಲಿ ₹5,000ರಿಂದ ₹50,000ದವರೆಗೆ ವಿದ್ಯಾರ್ಥಿವೇತನ ನೀಡಲಾಗುವುದು. ವಿಶೇಷ ಸಾಧನೆ ಮಾಡಿದ ಅರ್ಹ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣದ ಸೌಲಭ್ಯವೂ ಇರಲಿದೆ. ಈ ಉದ್ದೇಶಕ್ಕಾಗಿ ಒಟ್ಟು ₹90 ಲಕ್ಷವನ್ನು ಮೀಸಲಿಡಲಾಗಿದೆ ಎಂದು ಆ್ಯಂಡೋ ಪಾಲ್ ವಿವರಿಸಿದರು.

ಪುಸ್ತಕ ಬಿಡುಗಡೆ, ಆರೋಗ್ಯ ಶಿಬಿರಗಳ ಆಯೋಜನೆ
ವರ್ಷಾಚರಣೆಯ ಅಂಗವಾಗಿ ಸೊರಕೆ ಚಂದ್ರಶೇಖರ್ ಅವರ ಜೀವನ, ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಒಳಗೊಂಡ ಪುಸ್ತಕವನ್ನು ಪ್ರಕಟಿಸಲು ಸಿದ್ಧತೆ ನಡೆಸಲಾಗುತ್ತಿದೆ. ಜತೆಗೆ, ಸಂಸ್ಥೆಯ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಸೊರಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವ ಆರೋಗ್ಯ ಸಂಬಂಧಿತ ಹಾಗೂ ಇತರ ಸಮಾಜಮುಖಿ ಚಟುವಟಿಕೆಗಳನ್ನು ವರ್ಷವಿಡೀ ನಡೆಸಲು ಯೋಜಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಮತ್ತು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ಈ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಯು.ಕೆ. ಖಾಲಿದ್ ಉಪಸ್ಥಿತರಿದ್ದರು.

