ಮಂಜೇಶ್ವರ : ಕರಾವಳಿಯ ಮನೆ-ಮನೆಗಳಲ್ಲಿ ನವರಾತ್ರಿ ಎಂದರೆ ಅದೊಂದು ಹಬ್ಬವಷ್ಟೇ ಅಲ್ಲ, ಅದು ಭಕ್ತಿ ಮತ್ತು ಕಲೆಯ ಮಹಾಸಂಗಮ. ದುರ್ಗಾಮಾತೆಯ ಆರಾಧನೆಯೊಂದಿಗೆ ನಾಡಿನಾದ್ಯಂತ ಡೊಳ್ಳು ಕುಣಿತ, ಚೆಂಡೆ ವಾದನದ ಸದ್ದು ಮೊಳಗಿದರೆ, ಗಡಿನಾಡ ಕಾಸರಗೋಡಿನಲ್ಲಿ ಮಾತ್ರ ಕರಡಿಯುಬ್ಬಿನ ಹೆಜ್ಜೆಗಳು, ಹುಲಿವೇಷದ ಗರ್ಜನೆ ಮೈ ನವಿರೇಳಿಸುತ್ತದೆ. ಈ ಬಾರಿ ನವರಾತ್ರಿ ಹಬ್ಬದ ವಿಶೇಷ ಮೆರುಗನ್ನು ಹೆಚ್ಚಿಸಲು ಮಂಜೇಶ್ವರದಲ್ಲಿ ಸದ್ದು ಮಾಡುತ್ತಿದೆ ಗಡಿನಾಡಿನ ಮಂಜೇಶ್ವರ ಪಿಲಿಗೊಬ್ಬು ಸೀಸನ್ 3’ ಹುಲಿವೇಷ ವೈಭವ



ಕಾಸರಗೋಡು ಜಿಲ್ಲೆಯಲ್ಲಿ, ಅಷ್ಟೇ ಅಲ್ಲ ಇಡೀ ಕೇರಳ ರಾಜ್ಯದಲ್ಲೇ ಪ್ರಥಮ ಬಾರಿಗೆ ಟಿವಿ ವಾಹನಿಯೊಂದು ಇಂತಹ ಭವ್ಯವಾದ ಹುಲಿವೇಷ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಹೊಸ ಇತಿಹಾಸ ಬರೆದಿದೆ.
ಕೇವಲ ಸಂಪ್ರದಾಯಕ್ಕೆ ಸೀಮಿತವಾಗದೆ, ಹುಲಿವೇಷ ಕಲೆಯನ್ನು ದೊಡ್ಡ ವೇದಿಕೆಗೆ ಕೊಂಡೊಯ್ದಿರುವ ಈ ಕಾರ್ಯಕ್ರಮ ಗಡಿನಾಡಿನ ಅತಿ ದೊಡ್ಡ ದಾಖಲೆಯ ಸಾಧನೆಯಾಗಿದೆ. ಒಟ್ಟು 15 ಲಕ್ಷ ರೂಪಾಯಿಗಳ ಭರ್ಜರಿ ಬಹುಮಾನ ಮೊತ್ತವನ್ನು ಹೊಂದಿರುವ ಈ ಸ್ಪರ್ಧೆಯು ಕಾಸರಗೋಡು ಜಿಲ್ಲೆಯ ಪ್ರತಿಭಾವಂತ ಹುಲಿವೇಷ ತಂಡಗಳಿಗೆ ತಮ್ಮ ಕಲೆ ಪ್ರದರ್ಶಿಸಲು ಸುವರ್ಣಾವಕಾಶ ಕಲ್ಪಿಸಿದೆ.

ಈ ಬಾರದ ಸೀಸನ್ 3 ರ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ ಅದು ಪುಟಾಣಿಗಳಿಗಾಗಿ ಆಯೋಜಿಸಲಾಗಿರುವ ‘ಕಿನ್ನಿ ಪಿಲಿ’ ಮಕ್ಕಳ ಹುಲಿವೇಷ ಸ್ಪರ್ಧೆ.
2 ರಿಂದ 5 ವರ್ಷ ಹಾಗೂ 6 ರಿಂದ 8 ವರ್ಷ ಎಂಬ ಎರಡು ವಿಭಾಗಗಳಲ್ಲಿ ಪುಟ್ಟ ಮಕ್ಕಳು ಮೈಗೆ ಹಳದಿ ಬಣ್ಣ ಬಳಿದು, ಹುಲಿವೇಷದ ಹೆಜ್ಜೆ ಹಾಕಿ ನೋಡುಗರ ಕಣ್ಮನ ಸೆಳೆದರು. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಧಾರೆ ಎರೆಯುವ ಈ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಣದಲ್ಲಿ ಪ್ರಖ್ಯಾತ ಹುಲಿವೇಷ ತಂಡಗಳ ಪೈಪೋಟಿ

ಮಂಜೇಶ್ವರದ ರಂಗೇರಿದ ರಂಗಮಂಚದಲ್ಲಿ ಗಡಿನಾಡಿನ ದಿಗ್ಗಜ ಹುಲಿವೇಷ ತಂಡಗಳು ಮುಖಾಮುಖಿಯಾಗಿ ಹನುಮಾನ್ ಟೈಗರ್ಸ್ ಉಪ್ಪಳ ಪ್ರಥಮ ಸ್ಥಾನ ಪಡೆದರೆ ಮಹಾಕಾಳಿ ಟೈಗರ್ ತೂಮಿನಾಡು ದ್ವೀತಿಯ ಸ್ಥಾನ ಪಡೆದು ತೃಪ್ತಿ ಪಡೆಯಿತು. ಶಿವಶಕ್ತಿ ಟೈಗರ್ಸ್ ಕುಂಜತ್ತೂರು ತೃತೀಯ ಸ್ಥಾನವನ್ನು ತನ್ನದಾಗಿಸಿತು.




ಈ ತಂಡಗಳ ಆಕರ್ಷಕ ಹೆಜ್ಜೆಗಳು, ಚೆಂಡೆಯ ತಮಟೆ ಸದ್ದು ಹಾಗೂ ವೇಷಧಾರಿಗಳ ಕಸರತ್ತುಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಗಣ್ಯರ ಉಪಸ್ಥಿತಿಯಲ್ಲಿ ಕಳೆಗಟ್ಟಿದ ರಂಗು
ಕೇರಳ ಹಾಗೂ ಕರ್ನಾಟಕದ ರಾಜಕೀಯ ಧುರೀಣರು, ನಾಟಕ ಮತ್ತು ಸಿನಿಮಾ ಕ್ಷೇತ್ರದ ಪ್ರಸಿದ್ಧ ಕಲಾವಿದರು ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಗಡಿನಾಡಿನ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿಹಿಡಿಯುವ ಈ ನವರಾತ್ರಿ ಉತ್ಸವವು ಕಲೆ ಮತ್ತು ಕಲಾಪ್ರೇಮಿಗಳ ಸಂಗಮವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮಂಜೇಶ್ವರದ ಬೀದಿಗಳಲ್ಲಿ ಹುಲಿಯ ಹೆಜ್ಜೆಗಳು ಹಬ್ಬದ ಸಡಗರವನ್ನು ದ್ವಿಗುಣಗೊಳಿಸಿವೆ.

