ಭಾರತವನ್ನು ದುರ್ಬಲಗೊಳಿಸಿ ವಿಭಜಿಸುವ ಪ್ರಯತ್ನ: ಪಾಶ್ಚಿಮಾತ್ಯ ಶಕ್ತಿಗಳೇ ಟಾರ್ಗೆಟ್ – ಮೋಹನ್ ಭಾಗವತ್

ನಾಗ್ಪುರ: ಭಾರತವನ್ನು ದುರ್ಬಲಗೊಳಿಸಿ ವಿಭಜಿಸುವ ಪ್ರಯತ್ನಗಳು ನಡೆಯುತ್ತಿದ್ದು, ಪಾಶ್ಚಿಮಾತ್ಯ ಶಕ್ತಿಗಳ ಅಂತಿಮ ಗುರಿ ಭಾರತವೇ ಆಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಎಚ್ಚರಿಕೆ ನೀಡಿದ್ದಾರೆ.

ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್‌ನ ವಾರ್ಷಿಕ ವಿಜಯದಶಮಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶ, ನೇಪಾಳ ಹಾಗೂ ಫ್ರಾನ್ಸ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾತ್ಮಕ ಘಟನೆಗಳನ್ನು ಉಲ್ಲೇಖಿಸಿ, ಭಾರತದಲ್ಲಿಯೂ ಆಡಳಿತ ಬದಲಾವಣೆಯ ಹೆಸರಿನಲ್ಲಿ ವ್ಯವಸ್ಥಿತ ಪ್ರಯತ್ನಗಳು ನಡೆಯುವ ಸಾಧ್ಯತೆಯಿದೆ ಎಂದರು. ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆದರೆ ಕೆಲವು ಜಾಗತಿಕ ಶಕ್ತಿಗಳ ಪ್ರಾಬಲ್ಯಕ್ಕೆ ಸವಾಲು ಎದುರಾಗಬಹುದು ಎಂಬ ಕಾರಣಕ್ಕೆ ದೇಶವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಅನಿವಾರ್ಯವಾದರೂ, ಅವು ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿರಬೇಕು. ರಾಜಕೀಯ ಹಿತಾಸಕ್ತಿಗಳಿಗಾಗಿ ಪ್ರತಿಭಟನೆಗಳನ್ನು ಬಳಸಿಕೊಂಡರೆ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆ ಹೆಚ್ಚಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ರಾಜಕೀಯ ನಾಯಕರು, ಪ್ರತಿಭಟನಾಕಾರರು ಹಾಗೂ ಆಡಳಿತ ವ್ಯವಸ್ಥೆ ಸಂವಿಧಾನದ ಮಿತಿಗಳನ್ನು ಪಾಲಿಸುವುದರೊಂದಿಗೆ ಸಭ್ಯ ಸಾರ್ವಜನಿಕ ಚರ್ಚೆ ಮತ್ತು ಗೌರವಯುತ ನಡವಳಿಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ವಿಜಯದಶಮಿ ಉತ್ಸವದ ಅಂಗವಾಗಿ ಮೋಹನ್ ಭಾಗವತ್ ಅವರು ಆಯುಧ ಪೂಜೆಯನ್ನೂ ನೆರವೇರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!