ಸುಳ್ಯ: ತೋಟಕ್ಕೆ ಬರುವ ಕಾಡುಹಂದಿಗಳನ್ನು ತಡೆಯಲು ಅಕ್ರಮವಾಗಿ ವಿದ್ಯುತ್ ಹರಿಸಿದ ತಂತಿ ತಗುಲಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣ ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯುತ್ ತಂತಿ ಅಳವಡಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ತೋಟದ ಮಾಲೀಕ ಮಧುಸೂಧನ್ ಭಟ್ ಅವರನ್ನು ಬಂಧಿಸದಿರುವುದಕ್ಕೆ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.


ಅ. 12ರಂದು ರಾತ್ರಿ ಕಲ್ಮಡ್ಕದಲ್ಲಿ ಈ ಘಟನೆ ನಡೆದಿತ್ತು. ಕಲ್ಮಡ್ಕದ ಬೊಮ್ಮೆಟ್ಟಿ ಬಾಬು ಮತ್ತು ಸೀತಾ ದಂಪತಿಯ ಪುತ್ರ, 28 ವರ್ಷದ ಭರತ್ ಹಾಗೂ ಬೆಳ್ತಂಗಡಿ ತಾಲೂಕಿನ ಮುಂಗೆಲು ನಿವಾಸಿಗಳಾದ ವೀರಪ್ಪ ಮತ್ತು ಸೀತಮ್ಮ ದಂಪತಿಯ ಪುತ್ರ, ಭರತ್ ಅವರ ಸಹೋದರಿ ಭವ್ಯಾ ಅವರ ಪತಿ, 34 ವರ್ಷದ ಗಣೇಶ್ ಮತ್ತು ಅವರ ಸಂಬಂಧಿ ಬಾಲಕ ಸಿಂಚನ್ ಮೀನು ಹಿಡಿಯಲು ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ತೋಡಿಗೆ ತೆರಳಿದ್ದರು.

ರಾತ್ರಿ 10.30ರ ಸುಮಾರಿಗೆ ತೋಡಿನ ಬಳಿ ಮೀನು ಹಿಡಿಯುತ್ತಿದ್ದ ವೇಳೆ, ತೋಟದ ಮೇಲ್ಭಾಗದಲ್ಲಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗಿದ್ದ ತಂತಿ ಅವರಿಗೆ ಕಾಣಿಸಿರಲಿಲ್ಲ. ಅದನ್ನು ದಾಟಲು ಮುಂದಾದ ಭರತ್ ಮತ್ತು ಗಣೇಶ್ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗಿದ್ದ ಬಾಲಕ ಸಿಂಚನ್ಗೂ ವಿದ್ಯುತ್ ತಗುಲಿ ದೂರಕ್ಕೆ ಎಸೆಯಲ್ಪಟ್ಟಿದ್ದು, ಕೈ, ಎದೆ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ತಿಳಿದ ತಕ್ಷಣ ತೋಟದ ಮಾಲೀಕ ಮಧುಸೂಧನ್ ಭಟ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಬೆಳ್ಳಾರೆ ಪೊಲೀಸರು ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ತೋಟದ ಮಾಲೀಕರ ಸೂಚನೆಯಂತೆ ವಿದ್ಯುತ್ ತಂತಿ ಅಳವಡಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಆದರೆ, ಸೂಚನೆ ನೀಡಿದ ತೋಟದ ಮಾಲೀಕರನ್ನು ಬಂಧಿಸದಿರುವುದನ್ನು ಖಂಡಿಸಿ ದಲಿತ ಸೇವಾ ಸಮಿತಿ ಹಾಗೂ ನಲಿಕೆಯವರ ಸಂಘ ಪ್ರತಿಭಟನೆಗೆ ಮುಂದಾಗಿವೆ.

ಮೃತ ಭರತ್ ಮತ್ತು ಗಣೇಶ್ ಇಬ್ಬರೂ ದೈವ ನರ್ತಕರಾಗಿದ್ದು, ಗುಳಿಗ, ಕಲ್ಲುರ್ಟಿ ಸೇರಿದಂತೆ ವಿವಿಧ ದೈವಗಳ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಭರತ್ ಪ್ರತಿಭಾವಂತ ಕ್ರಿಕೆಟ್ ಆಟಗಾರನಾಗಿದ್ದು, ರಾಜ್ಯಮಟ್ಟದ ಪಂದ್ಯಾಟಗಳಲ್ಲೂ ಭಾಗವಹಿಸಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಭರತ್ ಅವರ ಸಾವು ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಗಣೇಶ್ ಅವರಿಗೆ ಮೂರು ವರ್ಷದ ಹೆಣ್ಣು ಮಗುವಿದ್ದು, ಇಬ್ಬರು ಯುವಕರ ಅಕಾಲಿಕ ಮರಣದಿಂದ ಕುಟುಂಬಗಳು ದಿಕ್ಕು ತೋಚದಂತಾಗಿವೆ.

ಈ ಹಿನ್ನೆಲೆಯಲ್ಲಿ ತೋಟದ ಮಾಲೀಕ ಮಧುಸೂಧನ್ ಭಟ್ ಅವರನ್ನು ತಕ್ಷಣ ಬಂಧಿಸಬೇಕು ಹಾಗೂ ಮೃತರ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ ಸರಕಾರ ಗರಿಷ್ಠ ಪರಿಹಾರ ನೀಡಬೇಕು ಎಂದು ದಲಿತ ಸಂಘಟನೆಗಳು ಒತ್ತಾಯಿಸಿವೆ. ಅ. 22ರೊಳಗೆ ಬಂಧನವಾಗದಿದ್ದರೆ ಬೆಳ್ಳಾರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಮುಂದಿನ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೂ ಮುತ್ತಿಗೆ ಹಾಕಲು ನಿರ್ಧರಿಸಿರುವುದಾಗಿ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ದಲಿತ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಬೆಳ್ತಂಗಡಿ ನಲಿಕೆ ಸಂಘದ ಮುಖಂಡ ಸೇಸಪ್ಪ ನಲಿಕೆ ಹಾಗೂ ಎಸ್. ಪ್ರಭಾಕರ್ ಸೇರಿದಂತೆ ಸಂಘಟನೆಯ ಪ್ರಮುಖರು ಈ ಸಂಬಂಧ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

