ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ನಾಡಿನಾದ್ಯಂತ ದಸರಾ ಸಂಭ್ರಮ ಮನೆಮಾಡಿದೆ. ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಲು ಕ್ಯಾಪ್ಟನ್ ಪ್ರಶಾಂತ ಆನೆ ಸಜ್ಜಾಗಿದೆ.


ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆರೆದ ವಿಶೇಷ ವಾಹನದಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮಾರ್ಗದುದ್ದಕ್ಕೂ ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಈ ಬಾರಿ ಕ್ಯಾಪ್ಟನ್ ಪ್ರಶಾಂತ ಆನೆ ಮೊದಲ ಬಾರಿಗೆ ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರಲಿದೆ. ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ವಿರಾಜಮಾನಳಾಗಲಿದ್ದಾಳೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಯನ್ನು ಕಲಾವಿದರು ಆಕರ್ಷಕ ಚಿತ್ತಾರಗಳಿಂದ ಸಿಂಗರಿಸಿದ್ದಾರೆ. ಆನೆಗಳ ಸೊಂಡಿಲು, ಕಿವಿ, ದಂತ, ಕಾಲು ಹಾಗೂ ಬಾಲದ ಮೇಲೆ ಗಂಡಭೇರುಂಡ, ಶಂಖ ಮತ್ತು ಎಲೆಗಳ ವಿನ್ಯಾಸಗಳನ್ನು ಬಿಡಿಸಿ ಸಜ್ಜುಗೊಳಿಸಲಾಗಿದೆ.

ಸಂಜೆ 4.10ರಿಂದ 4.35ರವರೆಗಿನ ಶುಭ ಮೀನ ಲಗ್ನದಲ್ಲಿ ಮೈಸೂರು ಅರಮನೆಯ ಮುಂಭಾಗದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಸಂಜೆ 4.35ಕ್ಕೆ ಅಂಬಾವಿಲಾಸ ಅರಮನೆಯಿಂದ ಮೆರವಣಿಗೆ ಆರಂಭವಾಗಲಿದೆ.
ಅರಮನೆಯಿಂದ ಹೊರಡುವ ಜಂಬೂಸವಾರಿ ಸಯ್ಯಾಜಿರಾವ್ ರಸ್ತೆಯ ಮೂಲಕ ಬನ್ನಿಮಂಟಪ ಮೈದಾನವನ್ನು ತಲುಪಲಿದೆ. ಮೆರವಣಿಗೆಯಲ್ಲಿ ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ 70ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಹಾಗೂ ವಿವಿಧ ಜಿಲ್ಲೆಗಳ 32 ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.
ಗಜಪಡೆಯ 13 ಆನೆಗಳ ಪೈಕಿ 12 ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಈ ಬಾರಿ ಧನಂಜಯ ಆನೆಗೆ ಅವಕಾಶ ನೀಡಲಾಗಿಲ್ಲ. ಅಭಿಮನ್ಯು ನಿಶಾನೆ ಆನೆಯ ಜವಾಬ್ದಾರಿ ನಿರ್ವಹಿಸಲಿದ್ದು, ಲಕ್ಷ್ಮಿ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಸಾಗಲಿವೆ. ಗೋಪಿ, ನೌಪತ್, ಶ್ರೀಕಂಠ, ಏಕಲವ್ಯ, ಮಹೇಂದ್ರ, ಸುಗ್ರೀವ, ಶ್ರೀರಾಮ, ರೂಪಾ ಮತ್ತು ಚೈತ್ರಾ ಸಾಲಾನೆಗಳಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ನಾಡಿನ ಪರಂಪರೆ, ವೈಭವ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಸಾರುವ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಹಾಗೂ ಕಲಾಭಿಮಾನಿಗಳು ಮೈಸೂರಿನಲ್ಲಿ ಸೇರಿದ್ದಾರೆ.’

