ಮಂಗಳೂರು: ನವರಾತ್ರಿಯಲ್ಲಿ ಆರಾಧನೆ ಸ್ವೀಕರಿಸಿದ ನವದುರ್ಗೆಯರ ವರ್ಣರಂಜಿತ ಮೆರವಣಿಗೆ ಇಂದು ಬೆಳಗಿನ ಜಾವ ಸಂಪನ್ನಗೊಳ್ಳುವ ಮೂಲಕ ಮಂಗಳೂರು ದಸರಾ 2026 ಕ್ಕೆ ತೆರೆಬಿದ್ದಿದೆ.

ಜನಾರ್ದನ ಪೂಜಾರಿ ಅವರ ನಾಯಕತ್ವದಲ್ಲಿ ಆರಂಭಗೊಂಡ ಕುದ್ರೋಳಿ ದಸರಾ ಕಾಲಕ್ರಮೇಣ ಮಂಗಳೂರು ದಸರಾ ಆಗಿ ವಿಸ್ತಾರ ರೂಪ ಪಡೆದುಕೊಂಡಿತು. ನಿನ್ನೆ ಸಂಜೆ ಆರಂಭಗೊಂಡ ವೈಭವದ ದಸರಾ- ಶೋಭಾಯಾತ್ರೆಯಲ್ಲಿ ಜನಸಾಗರವೇ ನೆರೆದಿತ್ತು.

ಮಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನವದುರ್ಗೆ ಮತ್ತು ಇತರ ಟ್ಯಾಬ್ಲೊ ಹಾಗು ಕಲಾತಂಡಗಳ ಜೊತೆ ಸಾಗಿ ಬರುವ ಸ್ಮರಣೀಯ ಕ್ಷಣಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಜನರು ಕಣ್ತುಂಬಿಕೊಂಡರು.


ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ನಗರದಲ್ಲಿ ಜಮಾಯಿಸಿದ್ದರು..

ಮೆರವಣಿಗೆಯಲ್ಲಿ ಗಣೇಶ, ನವದುರ್ಗಾ ದೇವತೆಗಳು ಮತ್ತು ಶಾರದಾ ಮಾತೆಯ ಸುಂದರವಾಗಿ ಅಲಂಕರಿಸಲ್ಪಟ್ಟ ವಿಗ್ರಹಗಳನ್ನು ಅಲಂಕೃತ ರಥಗಳ ಮೇಲೆ ಇರಿಸಲಾಗಿತ್ತು. ವಿವಿಧ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವರ್ಣರಂಜಿತ ಟ್ಯಾಬ್ಲೋಗಳು ಮತ್ತು ಸಾಂಸ್ಕೃತಿಕ ತಂಡಗಳು ಹಬ್ಬದ ವಾತಾವರಣಕ್ಕೆ ಮೆರುಗು ನೀಡಿ, ಮಾರ್ಗದುದ್ದಕ್ಕೂ ಜನಸಂದಣಿಯನ್ನು ಆಕರ್ಷಿಸಿದವು.


ನವದುರ್ಗೆಯರಿಗೆ ವಿಧ್ಯುಕ್ತ ಮಂಗಳಾರತಿಯೊಂದಿಗೆ ಶೋಭಾಯಾತ್ರೆ ಪ್ರಾರಂಭವಾಯಿತು, ನಂತರ ದೇವತೆಗಳನ್ನು ಮಂಗಳೂರಿನ ಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಗರದ ಪ್ರಮುಖ ಪ್ರದೇಶಗಳನ್ನು ಒಳಗೊಂಡ ಮೆರವಣಿಗೆ ರಾತ್ರಿಯಿಡೀ ಮುಂದುವರೆಯಿತು, ಗುರುವಾರ ಬೆಳಿಗ್ಗೆ ಅಂತಿಮ ವಿಸರ್ಜನೆಗಾಗಿ ಚಿತ್ರಾ ಟಾಕೀಸ್ ಮಾರ್ಗದ ಮೂಲಕ ದೇವಸ್ಥಾನಕ್ಕೆ ತಲುಪಿತು.

ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಪ್ರದರ್ಶಿಸುವ ವಾರ್ಷಿಕ ಪ್ರದರ್ಶನವನ್ನು ವೀಕ್ಷಿಸಲು ಸಾವಿರಾರು ಭಕ್ತರು ಮಾರ್ಗದುದ್ದಕ್ಕೂ ಸಾಲುಗಟ್ಟಿ ನಿಂತಿದ್ದರು. ಕುದ್ರೋಳಿ ದಸರಾ, ಕರಾವಳಿ ಕರ್ನಾಟಕದ ಅತ್ಯಂತ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಈ ಪ್ರದೇಶದಾದ್ಯಂತ ಭಕ್ತರು ಆಕರ್ಷಿಸಿತು.ಅದೀಗ ಜನರ ದಸರಾ ಆಗಿ ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಉತ್ಸಾಹ ಮತ್ತು ಶಕ್ತಿಯನ್ನು ನೀಡಿದೆ.



