ಒಂಬತ್ತು ತಿಂಗಳ ತುಂಬು ಗರ್ಭಿಣಿಯ ಯಕ್ಷಗಾನ ಹೆಜ್ಜೆ; ಕಲಾವಿದೆ ದಿಶಾ ಶೆಟ್ಟಿಗೆ ವ್ಯಾಪಕ ಮೆಚ್ಚುಗೆ

ಮಂಗಳೂರು: ಯಕ್ಷಗಾನ ರಂಗಸ್ಥಳದಲ್ಲಿ 9 ತಿಂಗಳ ತುಂಬು ಗರ್ಭಿಣಿ ಹೆಜ್ಜೆ ಹಾಕಿ‌ ಹೊಸ ಅಧ್ಯಾಯ ತೆರೆದಿದ್ದಾರೆ. ಕಲಾವಿದೆ ಶ್ರೀಮತಿ ದಿಶಾ ಸಿ ಶೆಟ್ಟಿ ಅವರ ಈ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅವರ ಯಕ್ಷಗಾನ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ತುಂಬು ಗರ್ಭಿಣಿಗೆ ಅವರದೇ ಆದ ದೈಹಿಕ ಹಾಗು ಮಾನಸಿಕ ದುರ್ಬಲತೆಗಳು ಕಾಡುತ್ತಿರುತ್ತವೆ.ಕನಸು ಮತ್ತು ವ್ಯಾಕುಲತೆ ಜೊತೆಯಾಗಿ ಬಾಧಿಸುವ ಕಾಲಘಟ್ಟ ಅದು.ಆಸರೆ ಇಲ್ಲದೆ ನಡೆದಾಡುವುದೂ ಕಷ್ಟಕರ ಎನ್ನುವಂತಹ ಪರಿಸ್ಥಿತಿ ಆಗ ಇರುತ್ತದೆ.ಇಂತಹ ಸವಾಲುಗಳನ್ನು ಮೀರಿ ಕಲಾವಿದೆ ದಿಶಾ ರಂಗಸ್ಥಳದಲ್ಲಿ‌ಪಾತ್ರ ಮಾಡಿದ್ದಾರೆ. ಈ ಬಗ್ಗೆ ಕೇಳಿದರೆ ಇದು ಸಾಧನೆಯಲ್ಲ, ಟ್ರೆಂಡ್ ಕೂಡಾ ಅಲ್ಲ… ಇದು ನನ್ನ ಖುಷಿಯಷ್ಟೇ..!! ಎನ್ನುತ್ತಾರೆ ಅವರು ಇಂದು ಯಕ್ಷಗಾನದಲ್ಲಿ ಅನೇಕ ಹೆಣ್ಣುಮಕ್ಕಳು ಸಾಧನೆಯನ್ನು ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಪಾತ್ರಗಳನ್ನು‌ ನಿರ್ವಹಿಸುತ್ತಿದ್ದಾರೆ.


ವ್ಯಾಪಕ ಜನಮನ್ನಣೆಯನ್ನೂ ಪಡೆಯುತ್ತಿದ್ದಾರೆ. ಈ ಸಾಲಿನಲ್ಲಿ ದಶಕಗಳಿಂದ ತನ್ನ ಹೆಸರನ್ನು ಅಚ್ಚಳಿಯದೆ ಕಾಪಿಟ್ಟುಕೊಂಡು ಬಂದವರು ಶ್ರೀಮತಿ ದಿಶಾ ಸಿ ಶೆಟ್ಟಿ. ಮೂಲತಃ ಮಂಗಳೂರಿನ ಸುರತ್ಕಲ್ ನ ದಿಶಾ ಶೆಟ್ಟಿ ಎಳವೆಯಲ್ಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡವರು, ತಾಯಿ ಮತ್ತು ತಾಯಿಯ ಸಹೋದರಿಯರು ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರಿಂದ, ಯಕ್ಷಗಾನದ ಆಸಕ್ತಿ ಬಾಲ್ಯದಿಂದಲೇ ಬಂದಿದೆ.

ನಾಟ್ಯಗುರುಗಳಾದ ರಕ್ಷಿತ್ ಪಡ್ರೆ ಹಾಗೂ ರಾಕೇಶ್ ರೈ ಅಡ್ಕ ಅವರ ಶಿಷ್ಯೆಯಾಗಿ ದಿಶಾ ಶೆಟ್ಟಿ ರಂಗಸ್ಥಳದಲ್ಲಿ ಮಹಿಳಾ ಯಕ್ಷಗಾನ ರಂಗದ ಸಮರ್ಥ ಪುಂಡು ವೇಷಧಾರಿಯಾಗಿ ಗುರುತಿಸಿಕೊಂಡವರು. ಸುದರ್ಶನ, ಅಭಿಮನ್ಯು, ಅಶ್ವತ್ಥಾಮ, ಚಂಡ – ಮುಂಡರು ಇದು ಇವರಿಗೆ ಹೆಸರು ತಂದುಕೊಟ್ಟ ಪ್ರಮುಖ ಪಾತ್ರಗಳು. ಇವರ ರಾಧಾ ವಿಲಾಸದ ಕೃಷ್ಣ ಬಹುತೇಕ ಕರಾವಳಿಯಲ್ಲಿ ನೋಡದವರೇ ಇಲ್ಲ, ತನ್ನ ಅಕ್ಕ ಡಾ. ವರ್ಷಾ ಶೆಟ್ಟಿ ಅವರೊಂದಿಗೆ ಇವರು ಜೊತೆಯಾಗಿ ನಡೆಸಿಕೊಡುವ ಕೃಷ್ಣ – ರಾಧೆಯರ ಅಧ್ಬುತ ಪ್ರಯೋಗಕ್ಕೆ ಜನ ಮನಸೋತಿದ್ದಾರೆ.

ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಉಪನ್ಯಾಸಕಿಯಾಗಿರುವ ಇವರು, 9 ತಿಂಗಳ ತುಂಬು ಗರ್ಭಿಣಿಯಾಗಿ ಯಕ್ಷಗಾನ ರಂಗಸ್ಥಳದಲ್ಲಿ ಕಾಣಿಸಿಕೊಂಡು ಮತ್ತೆ ಜನಮಾನಸದಲ್ಲಿ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಸುರತ್ಕಲ್ ನಲ್ಲಿ ನಡೆದ ಯಕ್ಷಗಾನ ಒಂದರಲ್ಲಿ, ಕಯಾದುವಿನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಇದೀಗ ಆ ಭಾವನಾತ್ಮಕ ಸನ್ನಿವೇಶಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಹಾಗೂ ಮೆಚ್ಚುಗೆ ಪಡೆಯುತ್ತಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!