ತುಳು ಚಿತ್ರರಂಗದಲ್ಲಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆಯುತ್ತಾ ‘ಬನ’ ಸಿನಿಮಾ ಬಿಡುಗಡೆ!

ಮಂಗಳೂರು: ತುಳು ಚಿತ್ರರಂಗದಲ್ಲಿ ಕೇವಲ ಹಾಸ್ಯಕ್ಕೆ ಸೀಮಿತವಾಗದೆ, ವಿಭಿನ್ನ ಕಥಾಹಂದರ ಹಾಗೂ ವಿಷಯಾಧಾರಿತ ಸಿನಿಮಾಗಳತ್ತ ಚಿತ್ರತಂಡಗಳು ಮುಖ ಮಾಡುತ್ತಿವೆ. ಈ ಸಾಲಿಗೆ ಸೇರ್ಪಡೆಯಾಗಿರುವ ಹೊಸ ತುಳು ಸಿನಿಮಾ ‘ಬನ’ ಇಂದು ಕರಾವಳಿ ಜಿಲ್ಲೆಗಳ ಹಲವು ಚಿತ್ರಮಂದಿರಗಳಲ್ಲಿ ಹಾಗೂ ವಿದೇಶಗಳಲ್ಲಿ ತೆರೆಕಂಡಿದೆ.

ತುಳುನಾಡಿನ ದೈವಿಕ ನಂಬಿಕೆ, ಸಂಪ್ರದಾಯ ಮತ್ತು ನಾಗಬನದ ಸುತ್ತ ಹೆಣೆದಿರುವ ನಿಗೂಢ ಘಟನೆಗಳನ್ನು ಆಧರಿಸಿದ ಈ ಸಿನಿಮಾ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ನಿರೀಕ್ಷೆ ಮೂಡಿಸಿದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರು ಪ್ರಮುಖ ಪಾತ್ರದ ಮೂಲಕ ತುಳು ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.

ತಮ್ಮ ಪಾತ್ರದ ಕುರಿತು ಮಾತನಾಡಿರುವ ಅವರು, ಚಿತ್ರದ ಕಥೆಯಲ್ಲಿ ತಮ್ಮ ಪಾತ್ರದ ಸ್ವರೂಪವೇ ಕುತೂಹಲ ಮೂಡಿಸಲಿದೆ ಎಂದಿದ್ದಾರೆ. ಪಾತ್ರ ಖಳನಾಯಕನದ್ದೇ ಅಥವಾ ಬೇರೆಯೇ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಹ ಸಂಭಾಷಣೆ ಮತ್ತು ನಿರೂಪಣೆ ಚಿತ್ರದಲ್ಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಮುಂಬೈ ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಗಳನ್ನು ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ತಮಗೆ ಹೆಚ್ಚಿನ ಭರವಸೆ ಮೂಡಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ‘ಧರ್ಮಚಾವಡಿ’ ಹಾಗೂ ‘ಧರ್ಮದೈವ’ದಂತಹ ಸಾಂಸ್ಕೃತಿಕ ಕಥಾಹಂದರದ ಸಿನಿಮಾಗಳನ್ನು ನಿರ್ದೇಶಿಸಿರುವ ನಿತಿನ್ ರೈ ಕುಕ್ಕುಹಳ್ಳಿ, ‘ಬನ’ ಚಿತ್ರಕ್ಕೆ ನಿರ್ದೇಶನ ನೀಡಿದ್ದಾರೆ.
ತುಳುನಾಡಿನ ಜನರ ನಂಬಿಕೆ ಮತ್ತು ಭಕ್ತಿಯೊಂದಿಗೆ ಬೆಸೆದುಕೊಂಡಿರುವ ನಾಗಬನದ ಹಿನ್ನೆಲೆಯೇ ಈ ಚಿತ್ರದ ಪ್ರಮುಖ ಆಕರ್ಷಣೆ. ಕಾಡಿನಲ್ಲಿ ಸಿಗುವ ಮಗುವೊಂದು, ಅದರ ರಕ್ಷಣೆ, ನಾಗಬನಕ್ಕೆ ಹಾನಿ ಮಾಡಿದವರನ್ನು ಸುತ್ತುವರಿಯುವ ಅನಿರೀಕ್ಷಿತ ಘಟನೆಗಳು ಹಾಗೂ ಪ್ರಕೃತಿಯ ನಿಗೂಢತೆಯನ್ನು ಆಧರಿಸಿ ಸಿನಿಮಾ ರೂಪಿಸಲಾಗಿದೆ. ‘ನಮ್ಮ ಮಣ್ಣ ಕಥೆ’ ಎಂಬ ಅಡಿಬರಹವೂ ಚಿತ್ರದ ಕಥಾವಸ್ತುವಿನ ವಿಶೇಷತೆಯನ್ನು ಸಾರುತ್ತದೆ.
ಚಿತ್ರದ ಟ್ರೇಲರ್‌ನಲ್ಲಿರುವ ದೃಶ್ಯಗಳು ಮತ್ತು ಜಯಕಾರ್ತಿ ಅವರ ಹಿನ್ನೆಲೆ ಸಂಗೀತ ಈಗಾಗಲೇ ಕುತೂಹಲ ಹೆಚ್ಚಿಸಿವೆ.

ತಮ್ಮ ನಿರ್ದೇಶನದ ಮೂರನೇ ಚಿತ್ರವಾಗಿರುವ ‘ಬನ’ ಕುರಿತು ಮಾತನಾಡಿದ ನಿರ್ದೇಶಕ ನಿತಿನ್ ರೈ ಕುಕ್ಕುಹಳ್ಳಿ, ಸಾಮಾನ್ಯ ಮಾದರಿಗಿಂತ ಭಿನ್ನವಾಗಿ ಕಥೆಗೆ ಹೆಚ್ಚಿನ ಆದ್ಯತೆ ನೀಡಿ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಹೊಸಬರು ಹಾಗೂ ಅನುಭವಿ ಕಲಾವಿದರಿಗೆ ಅವಕಾಶ ಕಲ್ಪಿಸುವ ಮೂಲಕ ಸೀಮಿತ ಬಜೆಟ್‌ನಲ್ಲಿ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಪ್ರೀಮಿಯರ್ ಪ್ರದರ್ಶನಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಚಿತ್ರಮಂದಿರಗಳಲ್ಲಿಯೂ ಪ್ರೇಕ್ಷಕರ ಮೆಚ್ಚುಗೆ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

‘ಬನ’ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿರುವ ನಿಹಾಲ್ ರೈ ಅವರಿಗೆ ಇದು ಮೊದಲ ಸಿನಿಮಾ. ನಿರ್ದೇಶಕರು ಹೊಸ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದ ಕಥೆ ಪ್ರೇಕ್ಷಕರನ್ನು ಕೊನೆಯವರೆಗೂ ಕುತೂಹಲದಿಂದ ನೋಡುವಂತೆ ಮಾಡಲಿದೆ ಎಂಬ ವಿಶ್ವಾಸವನ್ನು ನಿಹಾಲ್ ರೈ ವ್ಯಕ್ತಪಡಿಸಿದ್ದಾರೆ. ನಾಯಕಿಯಾಗಿ ಕೃತಿ ಶ್ರೀನಿವಾಸ್ ಪೂಜಾರಿ ಕೂಡ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ರೂಪಾ ವರ್ಕಾಡಿ ಸೇರಿದಂತೆ ಶರತ್ ಆಳ್ವ, ಶ್ರೇಯಾ ಶೆಟ್ಟಿ, ವಿಜಯಹರಿ ರೈ, ವಿಕಾಸ್ ಪುತ್ತೂರು, ನಿರಂಜನ್ ಶೆಟ್ಟಿ, ಸವಿತಾ ಅಂಚನ್, ಧನ್ಯಾ ಪೂಜಾರಿ ಮತ್ತು ಪ್ರವೀಣ್ ಕೊಡಕ್ಕಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ ಹಾಗೂ ನವೀನ್ ನೇರಳಕಟ್ಟೆ ಅವರ ಸಂಕಲನ ಚಿತ್ರಕ್ಕಿದೆ.
ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಮಣಿಪಾಲ, ಕಾರ್ಕಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ಸೇರಿದಂತೆ ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ವಿದೇಶಗಳಲ್ಲಿಯೂ ಪ್ರದರ್ಶನ ಆರಂಭಿಸಿರುವ ‘ಬನ’ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುವ ಸಾಧ್ಯತೆಯೂ ಇದೆ ಎಂದು ಚಿತ್ರತಂಡ ತಿಳಿಸಿದೆ.
ಒಟ್ಟಿನಲ್ಲಿ, ತುಳುನಾಡಿನ ಮಣ್ಣಿನ ಸೊಗಡು, ನಂಬಿಕೆ ಮತ್ತು ನಿಗೂಢತೆಯನ್ನು ಬೆಸೆದಿರುವ ‘ಬನ’ ಸಿನಿಮಾ, ತುಳು ಚಿತ್ರರಂಗದಲ್ಲಿ ಕಥೆ ಆಧಾರಿತ ಸಿನಿಮಾಗಳಿಗೆ ಹೊಸ ದಿಕ್ಕು ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!